Thursday, January 30, 2025
Menu

ಆಸ್ತಿಗಳ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್: ಇಂದು ಶ್ರೀರಂಗಪಟ್ಟಣ ಬಂದ್‌

ರೈತರ ಜಮೀನು, ಪುರಾತತ್ವ ಇಲಾಖೆಯ ಆಸ್ತಿಗಳ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಹೆಸರು ಎಂದು ನಮೂದಾಗಿದ್ದು, ಇದನ್ನು ಖಂಡಿಸಿ ರೈತರು ಮತ್ತು ಹಿಂದೂ ಸಂಘಟನೆಗಳು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಇಂದು (ಸೋಮವಾರ) ಶ್ರೀರಂಗಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ನಡೆಸಿವೆ.

ಕೆಲವು ತೆರೆದಿದ್ದ ಅಂಗಡಿಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದ್ದಾರೆ. ಜಾಮೀಯಾ ಮಸೀದಿ ಸುತ್ತ ಬಿಗಿ ಪೊಲೀಸ್‌ ಬಂದೋಬ್ತ್‌ ಕಲ್ಪಿಸಲಾಗಿದೆ. ಟೈರ್ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ವಾಹನ ಸಂಚಾರ ಕೂಡ ವಿರಳವಾಗಿದೆ. ಬಂದ್ ಹಿನ್ನಲೆ ಗಾರ್ಮೆಂಟ್ಸ್ ಗಳಿಗೂ ರಜೆ ನೀಡಲಾಗಿದೆ. ಕುವೆಂಪು ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ಆಯೋಜನೆಯಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಗ್ರಾಮದ 50ಕ್ಕೂ ಹೆಚ್ಚು ರೈತರ ಆರ್‌ಟಿಸಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದು ಆಗಿದೆ. ಆರ್‌ಟಿಸಿಯಲ್ಲಿ ಸ್ವಾಧೀನದಾರರ ಕಲಂನಲ್ಲಿ ರೈತರ ಹೆಸರಿದ್ದರೂ ಋಣ ಕಲಂ ನಲ್ಲಿ ವಕ್ಫ್ ಹೆಸರು ನಮೂದಾಗಿರು ವುದು ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಜಮೀನನ‌ ಮೇಲೆ ಸಾಲ ತೆಗೆದುಕೊಂಡರೆ, ಕ್ರಯ ಮಾಡಿಸಿದರೆ ಮಾತ್ರ ಋಣ ಕಲಂನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ಉಲ್ಲೇಖವಾಗುತ್ತದೆ. ಬಹುತೇಕ ರೈತರ‌ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂದು ರೈತರು ದೂರಿದ್ದಾರೆ.

ರೈತರು ಜಮೀನು ಮಾರಾಟ, ಜಮೀನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ಆರ್‌ಟಿಸಿ ಪರಿಶೀಲನೆ ಮಾಡಿದಾಗ ವಕ್ಫ್ ವಿಚಾರ ಬೆಳಕಿಗೆ ಬಂದಿದೆ. ರೈತರ ಜಮೀನು ಮಾತ್ರವಲ್ಲದೇ ಪಾರಂಪರಿಕ ಕಟ್ಟದ, ಪುರಾತತ್ವ ಇಲಾಖೆ ಆಸ್ತಿಯ ಮೇಲೆ ವಕ್ಫ್‌ ಕಣ್ಣಿದೆ. ಶ್ರೀರಂಗಪಟ್ಟಣ ಸುತ್ತ ಇರುವ ಮದ್ದಿನ ಮನೆ ಸೇರಿದಂತೆ ಪುರಾತತ್ವ ಇಲಾಖೆ ಹತ್ತಾರು ಹೆಚ್ಚು ಆರ್‌ಟಿಸಿಗಳಲ್ಲಿ ವಕ್ಫ್‌ ಬೋರ್ಡ್ ಹೆಸರು ನಮೂದಾಗಿದೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ವಕ್ಫ್ ಬೋರ್ಡ್ ವಿರುದ್ಧ ಶ್ರೀರಂಗಪಟ್ಟಣ ಟೌನ್ ಸ್ವಯಂ ಪ್ರೇರಿತ ಬಂದ್‌ ಆಗಿದೆ.

ಬೆಳಗ್ಗೆ 6 ಗಂಟೆಯಿಂದ ಅಂಗಡಿಗಳು ಮುಚ್ಚಿವೆ. ವಿಶ್ವ ಹಿಂದೂ ಪರಿಷತ್, ಭಜರಂಗದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ರೈತರು ಹಾಗೂ ಜಾನುವಾರುಗಳೊಂದಿಗೆ ರಸ್ತೆಗೆ‌ ಇಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *