ಮುಂಬೈನ ಘಾಟ್ಕೋಪರ್ ಚಿರಾಗ್ ನಗರದ ಗೌಸಿಯಾ ಚಾಲ್‌ನಲ್ಲಿ ಬುಧವಾರ ಬೆಳಗಿನ ಜಾವ ಭೂಕುಸಿತವಾಗಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ನಾಲ್ಕರಿಂದ ಐದು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಗುಡ್ಡದ ಇಳಿಜಾರಿನ ಒಂದು ಭಾಗ ಕುಸಿದು ಎರಡು-ಮೂರು ಮನೆಗಳ ಮೇಲೆ ಬಿದ್ದಿವೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಮುಂದುವರಿದಿದೆ.
ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 80-100 ಮಿ.ಮೀ. ಮಳೆಯಾಗಿದ್ದು, ಕುರ್ಲಾ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮುಂದಿನ 24 ಗಂಟೆ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಎಚ್ಚರಿಕೆಯಿಂದಿರಲು
ಹವಾಮಾನ ಇಲಾಖೆ ಸೂಚಿಸಿದೆ. ಗುಡ್ಡ ಪ್ರದೇಶಗಳಲ್ಲಿ ಮತ್ತಷ್ಟು ಕುಸಿತ ಸಾಧ್ಯತೆ ಇದ್ದು ಆ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಬೆಂಕಿ ಅವಘಡದಲ್ಲಿ ಇಬ್ಬರ ಸಾವು
ವಿಲೇ ಪಾರ್ಲೆಯಲ್ಲಿರುವ ವಸತಿ ಕಟ್ಟಡದ 11 ನೇ ಮಹಡಿಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಫ್ಲಾಟ್ ಒಳಗಿದ್ದ ಎರಡೂವರೆ ವರ್ಷದ ಅಬೀರ್ ಮತ್ತು 23 ವರ್ಷದ ಅಂಕಿತಾ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹಲವರು ಗಂಭೀರ ಗಾಯಗೊಂಡಿದ್ದಾರೆ.
ಬೆಂಕಿ ಫ್ಲಾಟ್‌ನ ವಿದ್ಯುತ್ ವೈರಿಂಗ್, ಎಸಿ ಘಟಕ ಮತ್ತು ಗೃಹೋಪಯೋಗಿ ವಸ್ತುಗಳ ಮೂಲಕ ಹರಡಿದೆ. ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ವಸತಿ ಕಟ್ಟಡದ 11 ನೇ ಮಹಡಿಯಲ್ಲಿರುವ 1101 ಮತ್ತು 1102 ಫ್ಲಾಟ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಸಿ, ಗೃಹೋಪಯೋಗಿ ವಸ್ತುಗಳು, ಸೋಫಾಗಳು, ಹಾಸಿಗೆಗಳು ಮತ್ತು ಅಡುಗೆ ಪಾತ್ರೆಗಳು ಸೇರಿ 4,000 ಚದರ ಅಡಿ ಜಾಗ ಬೆಂಕಿಗೆ ಆಹುತಿಯಾಗಿದೆ.


