Thursday, January 30, 2025
Menu

ಸಿಎಂ ತವರಲ್ಲೂ ಮೈಕ್ರೋ ಫೈನಾನ್ಸ್ ಸಾಲಬಾಧೆಗೆ ಇಬ್ಬರ ಬಲಿ

ಮೈಸೂರು: ರಾಜ್ಯದ ಹಲವೆಡೆ ಸದ್ದು ಮಾಡುತ್ತಿರುವ ಮೈಕ್ರೋಫೈನಾನ್ಸ್ ಹಾವಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೂ ಭೇದಿಸುತ್ತಿದ್ದು, ಸಾಲಬಾಧೆಗೆ ಇಬ್ಬರು ಸಾವನ್ನಪ್ಪಿ ಒಬ್ಬ ರೈತ ವಿಡಿಯೋ ಮೂಲಕ ತನ್ನ ಅಳಲು ಹೇಳಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಜಯಶೀಲ (53) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯಾಗಿದ್ದಾರೆ.
ಜಯಶೀಲ ಅವರು ಐಐಎಫ್ ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಗಳಲ್ಲಿ ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ ೫ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು ಇಎಂಐ ಕಟ್ಟುತ್ತಿದ್ದರು. ಈ ಮಧ್ಯೆ ಸಾಲ ಮಾಡಿ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿತ್ತು. ಹೀಗಾಗಿ ಜಯಶೀಲ ಅವರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದು, ಜಮೀನಿನಲ್ಲಿ ವಿಷದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಸಿದ್ದಾರೆ.

ತಕ್ಷಣವೇ ಅವರನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಜಯಶೀಲ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.

ನಂಜನಗೂಡಿನ ಮಲ್ಕುಂಡಿ‌ ಗ್ರಾಮದ ಕೃಷ್ಣಮೂರ್ತಿ (32) ಮೃತ ವ್ಯಕ್ತಿ. ಸಂಘದ ಸಾಲದ ಹಣ ಕಟ್ಟಲಾಗದೆ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಳಗ್ಗೆಯಷ್ಟೆ ಸಂಘಕ್ಕೆ ಹಣಕಟ್ಟಬೇಕು ಸಾಲ ಕೊಡಿ ಎಂದು ಅಂಗಲಾಚಿದ್ದರೂ ಹಣ ಸಿಗದ ಹಿನ್ನೆಲೆಯಲ್ಲಿ ಈ ರೀತಿ ಮಾಡಿಕೊಂಡಿದ್ದಾರೆನ್ನಲಾಗುತ್ತಿದೆ. ಈ ಸಂಬಂಧ ಸ್ಥಳಕ್ಕೆ‌ ಹುಲ್ಲಹಳ್ಳಿ ಠಾಣಾ ಪೊಲೀಸರ ಭೇಟಿ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ಮಾಡಿದ ರೈತ: ಎಚ್.ಡಿ.ಕೋಟೆ ತಾಲ್ಲೂಕಿನ ಎನ್.ಬೆಳ್ತೂರು ಗ್ರಾಮದ ರೈತ ನಂಜಪ್ಪ ಎನ್ನುವವರು ಟ್ರ್ಯಾಕ್ಟರ್ ಸಾಲ ಮಾಡಿ ಅದರಿಂದ ಆಗಿತ್ತಿರುವ ಅನ್ಯಾಯದ ಬಗ್ಗೆ ಅಳಲು ಹೇಳಿಕೊಂಡು ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ಇನ್ನೂ ವಿಷಯ ತಿಳಿದು ಇಂದು ನಂಜನಗೂಡಿನ ತಾಲ್ಲೂಕು ಶವಾಗಾರದ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘ ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮ ಕೈಗೊಂಡು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *