ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಾಂಗ್ಪೋಕ್ಪಿ ಜಿಲ್ಲೆಯ ಸೈತು-ಗಂಫಜೋಲ್ ಉಪವಿಭಾಗದಲ್ಲಿರುವ ಲೋಯಿಬೋಲ್ ಖುಲ್ಲೆನ್ ಎಂಬಲ್ಲಿ ಮಹಿಳೆ ಸೇರಿದಂತೆ ಮೂವರನ್ನು ಹತ್ಯೆ ಮಾಡಲಾಗಿದೆ ಮತ್ತು ಏಳು ಮನೆಗಳನ್ನು ಸುಟ್ಟು ಹಾಕಲಾಗಿದೆ.
ರಾಷ್ಟ್ರೀಯ ಸಮಾಜವಾದಿ ಮಂಡಳಿಯ ನಾಗಲಿಮ್(ಎನ್ಎಸ್ಸಿಎನ್-ಐಎಂ) ಮತ್ತು ಅದರ ಪ್ರಾಕ್ಸಿ ಸಂಘಟನೆದ ಜೆಲಿಯಾಂಗ್ರಾಂಗ್ ಯುನೈಟೆಡ್ ಫ್ರಂಟ್ನ ಸಶಸ್ತ್ರ ಬಂಡುಕೋರರು ಈ ದಾಳಿಯನ್ನು ನಡೆಸಿದ್ದಾರೆ ಎಂದು ಕುಕಿ ಸಂಘಟನೆ ಕುಕಿ ಇನ್ಪಿ ಮಣಿಪುರ(ಕೆಐಎಂ)ಆರೋಪಿಸಿದೆ.
ಘಟನೆಯನ್ನು ಖಂಡಿಸಿದ ಕುಕಿ ಸಂಘಟನೆ, ಈ ಹಿಂಸಾಚಾರ ಕೃತ್ಯವು ಮೂವರು ಅಮಾಯಕ ನಾಗರಿಕರ ದುರಂತ ಹತ್ಯೆಗೆ ಮತ್ತು ಮನೆಗಳು ಹಾಗೂ ಜೀವನೋಪಾಯ ನಾಶಕ್ಕೆ ಕಾರಣವಾಗಿದೆ ಎಂದು ಹೇಳಿದೆ. ಅಲ್ಲದೆ ಈ ಘಟನೆಯು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಕಿಡಿ ಕಾರಿದೆ.
ಈ ಘಟನೆಯು ಮಾನವ ಘನತೆ ಮತ್ತು ಮೂಲಭೂತ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ. ಮನೆಗಳನ್ನು ಸುಟ್ಟುಹಾಕುವುದನ್ನು ಎಂದಿಗೂ ಸಮರ್ಥಿಸಲಾಗದು. ಈ ದಾಳಿ ಕುರಿತು ತಕ್ಷಣ ತನಿಖೆ ನಡೆಸಬೇಕು. ಈ ದಾಳಿ ನಡೆಸಿದವರು ಯಾರು ಎಂದು ಗುರುತಿಸಿ ಬಂಧಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳನ್ನು ಸಂಘಟನೆಯು ಒತ್ತಾಯಿಸಿದೆ.
ಮಣಿಪುರದಲ್ಲಿ 2023ರ ಮೇ ತಿಂಗಳಿನಿಂದ ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಹಿಂಸಾಚಾರದಲ್ಲಿ ಈವರೆಗೆ 250ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 58,800ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿ ನಿರಾಶ್ರಿತರ ಕೇಂದ್ರದಲ್ಲಿ ಬದುಕುತ್ತಿದ್ದಾರೆ.


