Menu

ಅಸ್ಸಾಂನಲ್ಲಿ ಪ್ರವಾಹ ಅವಾಂತರ: ಒಂದೇ ದಿನ 21 ಮಂದಿ ಸಾವು

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಬುಧವಾರ ಒಂದೇ ದಿನದಲ್ಲಿ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ 16 ಜಿಲ್ಲೆಗಳಲ್ಲಿನ 5.64 ಲಕ್ಷಕ್ಕೂ ಹೆಚ್ಚು ಜನರ ಬದುಕು ಪ್ರವಾಹಕ್ಕೆ ತತ್ತರಿಸಿದೆ.
ಈ ವರ್ಷ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವರದಿ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಅಂದರೆ 13 ಮಂದಿ ಅಸು ನೀಗಿದ್ದಾರೆ. ಚರೈದಿಯೋ ಜಿಲ್ಲೆಯಲ್ಲಿ ಐವರು, ಗೋಲಾಘಾಟ್‌ನಲ್ಲಿ ಇಬ್ಬರು ಹಾಗೂ ಜೋರ್ಹಾಟ್‌ನಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ. ರೆಗೋಲಾಘಾಟ್, ಕಾಮರೂಪ್, ಹೊಜೈ, ದಿಬ್ರುಗಢ, ಬಿಸ್ವನಾಥ್, ಧೇಮಾಜಿ, ಸೋನಿತ್ಪುರ್, ಉದಾಲ್ಗುರಿ, ನಾಗಾಂವ್, ಚರೈದಿಯೋ, ಕಾಮರೂಪ್ ಮೆಟ್ರೋ, ಜೋರ್ಹಾಟ್, ಟಿನ್ಸುಕಿಯಾ, ಕಾರ್ಬಿ ಆಂಗ್ಲಾಂಗ್, ಲಖಿಂಪುರ ಹಾಗೂ ಶಿವಸಾಗರ್ ಜಿಲ್ಲೆಗಳು ಪ್ರವಾಹದಿಂದ ತೀವ್ರವಾಗಿ ಸಂಕಷ್ಟಕ್ಕೆ ಒಳಗಾಗಿವೆ. ಸ್ಥಳಾಂತರಗೊಂಡ ಜನರಿಗಾಗಿ 71 ಪರಿಹಾರ ಶಿಬಿರತೆರೆಯಲಾಗಿದ್ದು, 12,284 ಮಂದಿ ಆಶ್ರಯ ಪಡೆದಿದ್ದಾರೆ. 202 ಪರಿಹಾರ ವಿತರಣಾ ಕೇಂದ್ರಗಳ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.

ಶಿವಸಾಗರ್ ಜಿಲ್ಲೆಯಲ್ಲಿ ದಿಖೌ ಮತ್ತು ದಿಸಾಂಗ್ ನದಿಗಳು ಅತ್ಯುನ್ನತ ಪ್ರವಾಹ ಮಟ್ಟ ಮೀರಿ ಹರಿಯುತ್ತಿವೆ. ನೇಮಾತಿಘಾಟ್‌ನ ಬ್ರಹ್ಮಪುತ್ರ ನದಿ, ಖೋವಾಂಗ್‌ನ ಬುರ್ಹಿದಿಹಿಂಗ್ ಹಾಗೂ ಗೋಲಾಘಾಟ್ ಮತ್ತು ನುಮಾಲಿಗಢದ ಧನ್ಸಿರಿ (ದಕ್ಷಿಣ) ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಭಾರತೀಯ ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

Related Posts

Leave a Reply

Your email address will not be published. Required fields are marked *