Menu

ನೀರು,ಕರೆಂಟ್ ಪೂರೈಕೆಯತ್ತ ಸರ್ಕಾರದ ಗಮನವಿರಲಿ

water

ರಾಜ್ಯಕ್ಕೆ ಮುಂಗಾರು ಆಗಮನ ಇನ್ನೂ ಬಹಳ ದೂರವಿದೆ. ಅಲ್ಲಿಯವರೆಗೂ ಜನ- ಜಾನುವಾರುವಿಗೆ ಕುಡಿಯುವ ನೀರಿನ ಸಮಸ್ಯೆ ತೊಂದರೆಯಾಗದಂತೆ ಕ್ರಮ ವಹಿಸುವ ಹೊಣೆಗಾರಿಕೆ ಸರ್ಕಾರದ್ದು. ಈ ದಿಶೆಯಲ್ಲಿ ಜನ ಪ್ರತಿನಿಧಿಗಳ ಪಾತ್ರವೂ ಗುರುತರ.

ರಾಜ್ಯದಲ್ಲಿ ರಣಬಿಸಿಲು.. ! ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಹಾಗೂ ಬಯಲಸೀಮೆ ಸೇರಿದಂತೆ ಬಹುತೇಕ ಕಡೆ ಬಿಸಿಲ ಬೇಗೆ ! ಗ್ರಾಮೀಣ ಪ್ರದೇಶಗಳಲ್ಲಿ ಬಿಂದಿಗೆಯ ನೀರಿಗೂ ಬವಣೆ. ಇನ್ನು ಕೆಲವು ಕೆಟ್ಟ ಕೊಳವೆಬಾವಿ. ಮತ್ತು ಹಲವೆಡೆ ಸರಿಯಾದ ಸಮಯಕ್ಕೆ ದೊರಕದ ವಿದ್ಯುತ್ ಸಂಪರ್ಕ.

ಇವುಗಳು ಪ್ರತಿ ಬೇಸಿಗೆಯಲ್ಲಿಯೂ ಜಿಲ್ಲಾಡಳಿತಕ್ಕೆ ಕಾಡುವ ಪ್ರಮುಖ ಸವಾಲುಗಳು. ಆದರೆ ಎರಡು, ಮೂರು ತಿಂಗಳ ಹಿಂದೆಯೇ ಇಂತಹ ಸಮಸ್ಯೆಗಳನ್ನು ಅಧಿಕಾರಿಗಳು ಗುರುತಿಸಿ ಮುನ್ನೆಚ್ಚರಿಕೆ ವಹಿಸಿದರೆ ಸಮಸ್ಯೆ ಉಲ್ಬಣಿಸದು. ಈ ಬಗೆಯ ಕ್ರಿಯಾ ಯೋಜನೆಗಳಿಗೆ ಜಿಲ್ಲಾಡಳಿತ ತನ್ನ ಮೊದಲ ಆದ್ಯತೆ ನೀಡುವುದು ವಿಧಿತ. ಇನ್ನು ಕೆಲವು ಕಡೆ ಜಿಲ್ಲಾಡಳಿತವು ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಂಡಿದ್ದರೂ ಇದನ್ನು ಜಾರಿಗೊಳಿಸುವ ಅಧೀನ ಅಧಿಕಾರಿಗಳ ಆಲಸ್ಯತನ ಮತ್ತು ತಾತ್ಸಾರ ಧೋರಣೆಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬಾಗಲಕೋಟೆ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಕೆರೆ ಮತ್ತು ಕುಂಟೆಗಳು ಭರ್ತಿಯಾದರೂ ನೀರಿನ ಪೂರೈಕೆಯಲ್ಲಿ ಹಲವು ಹತ್ತು ಸಮಸ್ಯೆಗಳು ಉಂಟಾಗಿರುವುದು ಗಂಭೀರ.

ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್ ರಾಯಚೂರು, ಕೋಲಾರ , ಚಾಮರಾಜನಗರ ಮೊದಲಾದ ಕಡೆ ಅಂತಾರಾಜ್ಯ ಸಮಸ್ಯೆಗಳಿವೆ. ಇಲ್ಲಿನ ಜನತೆ ಒಂದರ್ಥದಲ್ಲಿ ನೀರು, ರಸ್ತೆ ಮತ್ತು ಸೇತುವೆಗಳಿಂದ ವಂಚಿತರಾದ ಜನತೆ ! ಅತ್ತ ಅಂಧ್ರ, ತೆಲಂಗಾಣವೂ ಇಲ್ಲ. ಇತ್ತ ಮಹಾರಾಷ್ಟ್ರ, ತಮಿಳುನಾಡೂ ಇಲ್ಲ. ಕೊನೆಗೆ ಕರ್ನಾಟಕದ ಸರ್ಕಾರವನ್ನು ನೆಚ್ಚಿ ಕುಳಿತುಕೊಳ್ಳುವ ಜನತೆಗೆ ಸಕಾಲದಲ್ಲಿ ಇವುಗಳು ಯಾವುದೂ ದೊರಕದು, ಅಧಿಕಾರಶಾಹಿ ಕಾರ್ಯವೈಖರಿ ಮತ್ತು ಶಿಷ್ಟಾಚಾರಗಳೂ ಜನತೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಡ್ಡಿಯಾಗಿದೆ ಎಂಬುದು ದುರ್ದೈವ.

ರಾಜ್ಯದ ಕೆಲವೊಂದು ಭಾಗಗಳಲ್ಲಿ ಅರ್ಧದಿನ ಮಾತ್ರ ಸರ್ಕಾರಿ ಶಾಲೆ, ಕಾಲೇಜು ಮತ್ತು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ತೀರ್ಮಾನಗಳು ಜನತೆ ಮತ್ತು ಆಡಳಿತ ಯಂತ್ರಾಂಗದ ದೃಷ್ಟಿಯಿಂದ ಸಕಾರಾತ್ಮಕ. ಗ್ರಾಮೀಣ ಪ್ರದೇಶಗಳಲ್ಲಿನ ಕೆರೆ, ಕುಂಟೆ ಮತ್ತು ಕೊಳವೆಬಾವಿಗಳ ಸಮರ್ಪಕ ನಿರ್ವಹಣೆ ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವಯತೆ ಅತಿಮುಖ್ಯ . ಕಂದಾಯ, ಇಂಧನ, ಅರಣ್ಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ನಡುವೆ ಸಮನ್ವತೆ ಇಲ್ಲದಿದ್ದರೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಎಷ್ಟು ಸಭೆಗಳು ನಡೆದರೂ ಅದು ಪ್ರಯೋಜನವಾಗದು.

ಈ ದಿಶೆಯಲ್ಲಿ ಲಭ್ಯ ಸಂಪನ್ಮೂಲಗಳ ಪ್ರಮಾಣ ಮತ್ತು ಅವುಗಳ ಪೂರೈಕೆ . ಅಲ್ಲದೆ ಮತ್ತು ಜಿಲ್ಲಾವಾರು ಬೇಡಿಕೆ ಮತ್ತು ಕೊರತೆ ಪ್ರಮಾಣದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮಟ್ಟದಲ್ಲಿ ನಿಖರ ಮಾಹಿತಿ ಸಂಗ್ರಹ ಅತಿ ಮುಖ್ಯ. ರಾಜ್ಯಕ್ಕೆ ಮುಂಗಾರುವಿನ ಆಗಮನ ಇನ್ನೂ ಬಹಳ ದೂರವಿದೆ. ಅಲ್ಲಿಯವರೆಗೂ ಜನ- ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ತೊಂದರೆಯಾಗದಂತೆ ಕ್ರಮ ವಹಿಸುವ ಹೊಣೆಗಾರಿಕೆ ಸರ್ಕಾರದ್ದು. ಈ ದಿಶೆಯಲ್ಲಿ ಜನ ಪ್ರತಿನಿಧಿಗಳ ನೇರ ಪಾತ್ರವೂ ಗುರುತರ.

Related Posts

Leave a Reply

Your email address will not be published. Required fields are marked *