Menu

ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆಗೈದ ಪತಿ

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯು ಪತ್ನಿಯನ್ನು ಕೊಲೆಗೈದ ಘಟನೆ ಭಾಲ್ಕಿ ತಾಲೂಕಿನ ಗಾಯಮುಖ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಪಕ್ಕದ ಮನೆಯ ಹುಡುಗಿಯೊಂದಿಗೆ ಪತಿ ಅನೈತಿಕ ಸಂಬಂಧ ಇಟ್ಟುಕೊಂಡಿರುವುದನ್ನು ಪ್ರಶ್ನಿಸಿದ ಪತ್ನಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಸಂಜನಾ (26) ಕೊಲೆಯಾದ ಮಹಿಳೆ, ಪತಿ ಭಗವತ್ ಜ್ಞಾನೇಶ್ವರ ಕೊಲೆ ಆರೋಪಿ, ಎರಡು ವರ್ಷಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರು.

ಆರೋಪಿ ಭಗವತ್ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೀದರ್‌ನ ಶಿವನಗರದಲ್ಲಿ ವಾಸವಾಗಿದ್ದರು. ಪಕ್ಕದ ಮನೆಯ ಹುಡುಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ಪತ್ನಿ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡು ದೇವರ ದರ್ಶನಕ್ಕೆಂದು ಹೇಳಿ ಕಾರಿನಲ್ಲಿ ಹೊನ್ನಿಕೇರಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದ. ಮೈಲಾರ ಮಲ್ಲಣ್ಣ ಮತ್ತು ಶನಿಮಹಾತ್ಮ ದೇವರ ದರ್ಶನ ಮಾಡಿಸಿದ್ದ. ಜಗದೇಶ್ವರಿ ಮಠದ ಬಳಿ ಬಂದು ತಗ್ಗು ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಕಬ್ಬಿಣದ ರಾಡ್‌ನಿಂದ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ.

ಗಂಭೀರ ಗಾಯಗೊಂಡಿದ್ದ ಸಂಜನಾಳನ್ನು ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.  ಕಳೆದ ವರ್ಷ ಜುಲೈನಲ್ಲಿ ಆರೋಪಿ ಭಗವತ್ ಸಂಜನಾಳಿಗೆ ನೀರಿನಲ್ಲಿ ಕೀಟನಾಶಕ ಔಷಧಿ ಬೆರ ಕೊಟ್ಟು ಕೊಲ್ಲಲು ಯತ್ನಿಸಿದ್ದ, ಅದೃಷ್ಟವಶಾತ್ ಬದುಕುಳಿದಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.
ಧನ್ನೂರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಭಗವತ್ ಜ್ಞಾನೇಶ್ವರನನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *