Thursday, January 30, 2025
Menu

ಪ್ರಿಯಕರನೊಂದಿಗಿದ್ದ ಗರ್ಭಿಣಿ ಅನುಮಾನಾಸ್ಪದ ಸಾವು

ಚಿಕ್ಕಬಳ್ಳಾಪುರ ತಾಲೂಕಿನ ಗುಂತಪನಹಳ್ಳಿ ಗ್ರಾಮದಲ್ಲಿ ಪ್ರಿಯಕರನ ಜೊತೆ ವಾಸವಿದ್ದ 8 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಅಂಬೇಡ್ಕರ್ ನಗರದ ನಿವಾಸಿ ಅನುಷಾ (28) ಮೃತ ಗರ್ಭಿಣಿ. ಹೊಸಕೋಟೆ ಮೂಲದ ವ್ಯಕ್ತಿಯೊಂದಿಗೆ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಒಂದು ಹೆಣ್ಣು ಮಗು ಇತ್ತು. ಗಂಡನ ಅನಾರೋಗ್ಯದ ಕಾರಣ ಆತನನ್ನು ತೊರದು ತವರು ಮನೆಯಲ್ಲಿ ವಾಸವಾಗಿದ್ದಳು.

ಕೂಲಿ ಮಾಡುತ್ತಿದ್ದ ಅನುಷಾಳಿಗೆ ಗುಂತಪನಹಳ್ಳಿ ಗ್ರಾಮದ ಪವನ್ ಪರಿಚಯವಾಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದು ಗರ್ಭಿಣಿ ಆಗಿದ್ದಾಳೆ. ತನ್ನನ್ನು ಮದುವೆಯಾಗುವಂತೆ ಅನುಷಾ ಒತ್ತಾಯಿಸಿ ಪವನ್ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಬೇರೆ ಜಾತಿ, ಎರಡನೇ ಮದುವೆ ಅಂತ ಪವನ್ ಮನೆಯವರು ಇಬ್ಬರಿಗೂ ಬೈದು ಮನೆಗೆ ಸೇರಿಸಿಲ್ಲ.

15 ದಿನಗಳ ಹಿಂದೆ ಪವನ್ ಊಟದ ಜೊತೆ ಇಲಿ ಪಾಷಾಣ ತಿನ್ನಿಸಿ ಕೊಲೆ ಮಾಡಲು ಯತ್ನಿಸಿದ್ದ ಎಂದು ಆಕೆ ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದು ಇಬ್ಬರೂ ಜೊತೆಯಲ್ಲಿದ್ದರು. ಇಬ್ಬರೂ ರಾತ್ರಿ ಗುಂತಪನಹಳ್ಳಿ ಗ್ರಾಮದ ಬಳಿ ಮರದಡಿ ಮದ್ಯಪಾನ ಮಾಡಿ ಮಲಗಿದ್ದರಂತೆ. ಬೆಳಗ್ಗೆ ಎದ್ದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪವನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *