ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಕಾಲೇಜು ಶುಲ್ಕ ಕಟ್ಟಲು ತಂದೆ ನೀಡಿದ್ದ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿ, ಆ ಹಣ ಮರಳಿ ಸಿಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಭಟ್ಕಳದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕಾಲೇಜು ಶುಲ್ಕ ಪಾವತಿಸಲು ತಂದೆ ನಾಗರಾಜ ಲಚ್ಚಯ್ಯ ನಾಯ್ಕ ಗಾಯತ್ರಿಗೆ 10 ಸಾವಿರ ರೂಪಾಯಿ ನೀಡಿದ್ದರು. ಊರಿನ ಪರಿಚಯಸ್ಥ ಸಂತೋಷ ಮಾಧೇದ ನಾಯ್ಕ ಎಂಬಾತ ನಿಗದಿತ ಸಮಯಕ್ಕೆ ಮರಳಿ ನೀಡುವುದಾಗಿ ಹೇಳಿ ಆಕೆಯಿಂದ 10 ಸಾವಿರ ರೂಪಾಯಿ ಸಾಲ ಪಡೆದಿದ್ದ.
ನಿಗದಿತ ಸಮಯ ಕಳೆದರೂ ಹಣವನ್ನು ಮರಳಿ ನೀಡಿರಲಿಲ್ಲ. ಗಾಯತ್ರಿಗೆ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದೆ ಪರೀಕ್ಷೆಯ ಹಾಲ್‌ಟಿಕೆಟ್ ಕೂಡ ದೊರೆತಿರಲಿಲ್ಲ. ಇದರಿಂದ ನೊಂದ ಗಾಯತ್ರಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಡಿಯಿಂದ ಜಿಗಿದು ಮಹಿಳಾ ಟೆಕ್ಕಿ ಸಾವು
ಮಹಿಳಾ ಟೆಕ್ಕಿ ಆರು ತಿಂಗಳ ಮಗುವಿನೊಂದಿಗೆ ಅಪಾರ್ಟ್‌ಮೆಂಟ್‌ನ 6ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದು, ಮಗು ಬದುಕುಳಿದಿರುವ ಘಟನೆ ಹೈದರಾಬಾದ್‌ನ ಮಿಯಾಪುರ್ ಪ್ರದೇಶದ ಮಯೂರಿ ನಗರದಲ್ಲಿ ನಡೆದಿದೆ.
ಇಶಾ ಸಾಹು (37) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಇಶಾ ಆರು ತಿಂಗಳ ಮಗುವನ್ನು ತೋಳಲ್ಲಿ ಹಿಡಿದುಕೊಂಡು ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಿಂದ ಜಿಗಿದಿದ್ದಾರೆ. ಕೆಳಗೆ ಬೀಳುವಾಗ ಮಗು ಅವರ ಕೈಯಿಂದ ಜಾರಿಬಿದ್ದು, ಸಣ್ಣ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದೆ.
ಸ್ಥಳೀಯ ನಿವಾಸಿಗಳು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವನ್ನು ಲೇ ಕೆಪಿಎಚ್‌ಬಿಯಲ್ಲಿರುವ ಲೋಟಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈಶಾ ಸಾಹು ಹಲವು ತಿಂಗಳುಗಳಿಂದ ನಿದ್ರಾಹೀನತೆ ಸೇರಿದಂತೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಸಮಸ್ಯೆಯಿಂದ ಉಂಟಾದ ಮಾನಸಿಕ ಒತ್ತಡ ಮತ್ತು ಆತಂಕವೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಘಟನೆಯ ನಿಖರ ಕಾರಣ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


