ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವರುಣಾ ವ್ಯಾಪ್ತಿಯಲ್ಲಿ ಬರುವ ಸಿದ್ದರಾಮಯ್ಯಹುಂಡಿ ಬಳಿಯ ಶ್ರೀನಿವಾಸಪುರ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ನೊಂದ ಕುಟುಂಬದವರು ಜಿಲ್ಲಾಧಿಕಾರಿ, ಪೊಲೀಸರು ಹಾಗೂ ತಹಶೀಲ್ದಾರ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ದಲಿತ ಸಮುದಾಯದ ಸುರೇಶ್ ಎಂಬವರ ಕುಟುಂಬಕ್ಕೆ ಗ್ರಾಮದ ಯಜಮಾನರಾದ ಚಿಕ್ಕಂಡಯ್ಯ, ಬಸವಯ್ಯ, ಮೋಟ ಮಹದೇವಯ್ಯ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಹದೇವ್ ಬಹಿಷ್ಕಾರ ಹಾಕಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ರಂಗನಾಥಪುರ ಗ್ರಾಮದ ಪ್ರಮೋದ್ ಹಾಗೂ ಸುರೇಶ್ ನಡುವೆ ಗಲಾಟೆ ನಡೆದಿತ್ತು. ಪ್ರಮೋದ್ ಕಡೆಯವರು ಸುರೇಶ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೆ ಮನೆಯ ವಸ್ತುಗಳನ್ನು ಹಾಳು ಮಾಡಿದ್ದರು. ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಇಬ್ಬರಿಗೂ ದಂಡ ಹಾಕಲಾಗಿತ್ತು. ಪ್ರಮೋದ್ ಗೆ 25,000 ಹಾಗೂ ಸುರೇಶ್ಗೆ 15000 ರೂಪಾಯಿ ದಂಡ ವಿಧಿಸಿದ್ದರು.
ತಮಗೆ ಅನ್ಯಾಯವಾಗಿದ್ದರಿಂದ ದಂಡದ ಮೊತ್ತ ಪಾವತಿಸುವುದಿಲ್ಲ ಎಂದು ಸುರೇಶ್ ಹೇಳಿದ್ದರು. ಇದರಿಂದ ಕೆರಳಿದ ಯಜಮಾನರು, ನ್ಯಾಯ ಪಂಚಾಯಿತಿ ವಿಚಾರದಲ್ಲಿ ತಮಗೆ ಮುಜುಗರ ಆಗಿದೆ ಎಂದು ಸುರೇಶ್ ಮೇಲೆ ಸಿಟ್ಟಾಗಿ ತಪ್ಪು ಕಾಣಿಕೆ ಕಟ್ಟುವವರೆಗೂ ತಮ್ಮ ಕುಲಕ್ಕೆ ಸೇರಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿದ್ದಾರೆ.
ಸುರೇಶ್ ಹಾಗೂ ಅವರ ತಾಯಿ ಮಹದೇವಮ್ಮ ಇಬ್ಬರನ್ನು ಗ್ರಾಮಸ್ಥರು ಹೊರಗಿಟ್ಟಿದ್ದಾರೆ. ಸುರೇಶ್ ಕುಟುಂಬದ ಜೊತೆ ಯಾರೇ ಸಂಪರ್ಕಕ್ಕೆ ಬಂದರೂ 5,000 ರೂ. ದಂಡ ವಿಧಿಸಬೇಕು ಎಂದು ಗ್ರಾಮದ ಯಜಮಾನರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.