Monday, September 07, 2026
Menu

ಸರ್ವರಿಗೂ ನ್ಯಾಯ, ಸಮಾನ ಅವಕಾಶ ಸಿಗೋವರೆಗೆ ನಿಮ್ಮೊಂದಿಗೆ ಹೋರಾಡುವೆ: ಮಾಜಿ ಸಿಎಂ ಸಿದ್ದರಾಮಯ್ಯ

ಸರ್ವರಿಗೆ ನ್ಯಾಯ ಸಿಗುವವರೆಗೆ , ಸಮಾನ ಅವಕಾಶ ಸಿಗುವವರೆಗೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೆ ನಿಮ್ಮೊಂದಿಗೆ ಇದ್ದು, ಹೋರಾಟ ಮಾಡುತ್ತೇನೆ. ಹೀಗಾಗಿ ನೀವ್ಯಾರೂ ಆತಂಕಕ್ಕೆ ಒಳಪಡುವ ಅವಶ್ಯಕತೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣಾ ರಾಜಕೀಯದಿಂದ ಮಾತ್ರ ನಾನು ಹಿಂದೆ ಸರಿದಿದ್ದೇನೆ. ನನಗೆ ವಯಸ್ಸಾಗಿದೆ, ಆ ಕಾರಣದಿಂದ ನಾನು ಚುನಾವಣೆಗೆ ನಿಲ್ಲುವುದಿಲ್ಲ.  ಜೊತೆಗೆ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿದೆ.  ನಿಮಗೆ ನ್ಯಾಯ ಸಿಗುವವರೆಗೆ, ಸಮಾನ ಅವಕಾಶ ಸಿಗುವವರೆಗೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೆ ನಿಮ್ಮೊಂದಿಗೆ ಇದ್ದು, ಹೋರಾಟ ಮಾಡುತ್ತೇನೆ. ಹೀಗಾಗಿ ನೀವ್ಯಾರು ಆತಂಕಕ್ಕೆ ಒಳಪಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 25 ವರ್ಷ ತುಂಬಿರುವ ಸಂದರ್ಭದಲ್ಲಿ ಇಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವನ್ನು ಆಚರಣೆ ಮಾಡುತ್ತಿದ್ದೇವೆ. ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಹ್ವಾನವನ್ನು ನೀಡಿದ್ದರು. ಆದರೆ ನನಗೆ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎಂದು ಆಹ್ವಾನ ಪತ್ರಿಕೆಯನ್ನು ನೋಡಿದ ಮೇಲೆ ತಿಳಿಯಿತು. ಇದರ ಅವಶ್ಯಕತೆ ಇರಲಿಲ್ಲ ಎಂಬುದು ನನ್ನ ಭಾವನೆ ಎಂದು ತಿಳಿಸಿದರು.

ನಾನು ಹಿಂದುಳಿದ ಜಾತಿಗೆ ಸೇರಿದವನು ಎಂದು ಹೇಳಲು ಯಾವುದೇ ಮುಜಗರವಿಲ್ಲ.  ನಾನು ಶೂದ್ರಕ್ಕೆ ಸೇರಿದವನು. ಲಿಂಗಾಯತ, ಒಕ್ಕಲಿಗ ಆದಿಯಾಗಿ ನಾವೆಲ್ಲರೂ ಕೂಡ ಶೂದ್ರರೆ. ಚತುರ್ವರ್ಣ ವ್ಯವಸ್ಥೆಯಲ್ಲಿ ಮೇಲಿನ ಮೂರು ಜಾತಿಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಅವಕಾಶಗಳಿದ್ದವು. ಆದರೆ ಶೂದ್ರರಿಗೆ ಅವಕಾಶಗಳು ಸಿಗಲಿಲ್ಲ.  ಯಾರ್ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೆ ಅವರೆಲ್ಲರ ಪರವಾಗಿ ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು, ಯಾರೊಬ್ಬರೂ ದೌರ್ಜನ್ಯಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಅಸಮಾನತೆಯ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದೇನೆ. ಈಗಲೂ ಕೂಡ ಧ್ವನಿ ಎತ್ತುತ್ತೇನೆ ಎಂದರು.

ಇದು ಒಕ್ಕೂಟದ ರಜತ ಮಹೋತ್ಸವ. 2001ರಲ್ಲಿ ಇದು ಪ್ರಾರಂಭಗೊಂಡಿರುವುದು. ಶ್ರೀನಿವಾಸ್‌ ಎಂಬ ಬೆಸ್ತ ಸಮುದಾಯಕ್ಕೆ ಸೇರಿದಂತಹ ವ್ಯಕ್ತಿ ಇದರ ಸಂಸ್ಥಾಪಕರಾಗಿದ್ದರು. ಈಗ ರಾಮಚಂದ್ರಪ್ಪನವರು ಅಧ್ಯಕ್ಷರಾಗಿದ್ದಾರೆ. ಇನ್ನೂ ಸಮಾಜದಲ್ಲಿ ಸಮಾನತೆ ಬಂದಿಲ್ಲ, ಅಸಮಾನತೆಯೂ ತೊಲಗಿಲ್ಲ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನವನ್ನು ಈ ದೇಶಕ್ಕೆ ಕೊಟ್ಟರು. ಸ್ವಾತಂತ್ರ್ಯ ಬಂದು 79 ವರ್ಷಗಳಾಯಿತು. ಸಂವಿಧಾನ ಬಂದು 76 ವರ್ಷಗಳಾಯಿತು. ಆದರೆ ಇನ್ನೂ ಎಲ್ಲರಿಗೂ ಸಮಾನ ಅವಕಾಶ ದೊರಕಿಲ್ಲ, ಜೊತೆಗೆ ಸಮ ಸಮಾಜ ನಿರ್ಮಾಣ ಆಗಿಲ್ಲ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ನಿಮ್ಮ ಹೋರಾಟ ಇರಲೇಬೇಕು ಎಂದು ಸಭೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.

ನಾನು 1996ರಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಸಮ ಸಮಾಜ ಸಿಕ್ಕಿರಲಿಲ್ಲ. ಆದರೆ ಆಗಲೇ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು ಎಂಬ ಕನಸುಗಳನ್ನು ಕಂಡಿದ್ದೆ. ರಾಜ್ಯದ ಜನರ ಜಾತಿವಾರು ಸಮೀಕ್ಷೆಯಾಗಿಲ್ಲ. ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ನಿಜವಾದ ಅಂಕಿ ಅಂಶಗಳಿಲ್ಲ ಎನ್ನುವ ಕಾರಣಕ್ಕಾಗಿ ಅನೇಕ ಮೊಕದ್ದಮೆಗಳಲ್ಲಿ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದಿರಲಿಲ್ಲ. ಅದಕ್ಕಾಗಿ ನಾನು 2013 ಮುಖ್ಯಮಂತ್ರಿಯಾದಾಗ ಕಾಂತರಾಜು ಅವರ ಹಿಂದುಳಿದ ವರ್ಗಗಳ ಅಧ್ಯಕ್ಷತೆಯಲ್ಲಿ ಸಮೀಕ್ಷೆಯನ್ನು ನಡೆಸುವಂತೆ ಹೇಳಿದ್ದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ವರದಿಯನ್ನು ಕೊಟ್ಟಿದ್ದರು. ಆದರೆ ಅವರು ವರದಿಯನ್ನು ಒಪ್ಪಿರಲಿಲ್ಲ ಎಂದು ತಿಳಿಸಿದರು.

2023ರಲ್ಲಿ ನಾನು ಮುಖ್ಯಮಂತ್ರಿಯಾದಾಗ ಹೊಸದಾಗಿ ಮಧುಸೂದನ್‌ ನಾಯಕ್‌  ಹಿಂದುಳಿದ ಶಾಸಕರ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ಅವರು ವರದಿ ನೀಡುವುದಾಗಿ ತಿಳಿಸಿದರು. ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ  ಸಂದರ್ಭ ಸ್ವೀಕಾರ ಮಾಡಿದ್ದೇನೆ.  ಆದರೆ ನ್ಯಾಯಾಲಯದ ಆದೇಶದಲ್ಲಿ ಅದನ್ನು ಬಹಿರಂಗಪಡಿಸಬಾರದು ಎಂದು ಆದೇಶವಿದೆ. ಈ ತಡೆಯನ್ನು ತೆರವು ಮಾಡಲು ಮನವಿ ಮಾಡುವಂತೆ ನಾನು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ ಅವರಿಗೆ ಹೇಳಿರುವುದಾಗಿ ತಿಳಿಸಿದರು.

ನ್ಯಾಯಾಲಯದ ತಡೆಯಾಜ್ಞೆಯನ್ನು ಏನಾದರೂ ಮಾಡಿ ನೀವೆಲ್ಲ ಸೇರಿ ತೆರವು ಮಾಡಿಸಿ. ಮುಖ್ಯಮಂತ್ರಿಗಳು ಸೇರಿದಂತೆ ಇಲ್ಲಿರುವವರೆಲ್ಲರೂ ನನ್ನ ಮಾತನ್ನು ಕೇಳುತ್ತಾರೆ ಎಂಬ ನಂಬಿಕೆ ನನಗಿದೆ. ಅದು ಜಾರಿಯಾಗಲೇಬೇಕು. ನಿಮಗೆಲ್ಲ ಸಾಮಾಜಿಕ ನ್ಯಾಯ ಸಿಗಬೇಕು. ಮೀಸಲಾತಿಯಲ್ಲಿ ಕನಿಷ್ಠ 75% ಸಿಗಲೇಬೇಕು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಅವರೆಲ್ಲರಿಗೂ ಕೂಡ 75% ಮೀಸಲಾತಿ ಸಿಗಬೇಕು. ಎಲ್ಲರಿಗೂ ಅವರ ಜಾತಿಗೆ ಅನುಗುಣವಾಗಿ, ಜಾತಿ ಸಂಖ್ಯೆಗಳನುಗುಣವಾಗಿ ಮೀಸಲಾತಿ ಸಿಗಬೇಕು. ಮೀಸಲಾತಿ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಹಿಂದುಳಿದ ಜಾತಿಗಳಲ್ಲಿ ಕೆಟಗರಿ 1, ಕೆಟಗರಿ 2 ಎ ಇವೆರಡರಲ್ಲಿ  752 ಜಾತಿಗಳಿದ್ದಾವೆ. ಒಟ್ಟು 806 ಹಿಂದುಳಿದ ಜಾತಿಗಳಿವೆ. ಕೆಟಗರಿ 1 ಮತ್ತು ಕೆಟಗರಿ 2ಎ ಅಷ್ಟು ಜನಸಂಖ್ಯೆಯವರು ಮಾತ್ರ ಈ ಒಕ್ಕೂಟದಲ್ಲಿ ಇರುವಂತವರು ಎಂದರು. ಮುಂದೆ ಕೆಟಗರಿ 3ಎ, 3ಬಿ ಕೂಡ ಸೇರಬೇಕು ಎಂದು ಹೇಳಿದರು.

ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಬಾರದು. ಆರ್ಥಿಕ, ಸಾಮಾಜಿಕ, ರಾಜಕೀಯದಲ್ಲಿ ಸಮಾನತೆ ಸಿಗುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲೇಬೇಕು. ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.

Related Posts

Leave a Reply

Your email address will not be published. Required fields are marked *