ಸಾಮಾಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ರೈತರು ಮತ್ತು ಅಧಿಕಾರಿಗಳಿಂದ ಹಣ ವಸೂಲಿ ಮಾಡುವ ಕರಪ್ಟ್ ಜಾಲಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕೇವಲ ಪ್ರಕರಣ ದಾಖಲಿಸುವುದಷ್ಟೇ ಅಲ್ಲದೆ, ‘ರೌಡಿ ಶೀಟರ್’ ಪಟ್ಟಿಗೆ ಸೇರಿಸಲಾಗುವುದು ಎಂದು ಗುಡುಗಿದ್ದಾರೆ. ಬೆಳಗಾವಿ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮ ರಂಗದ ಪಾವಿತ್ರ್ಯತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಯುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಪ್ರಕಟಿಸಿದರು.
ಇತ್ತೀಚಿನ ದಿನಗಳಲ್ಲಿ ಕೆಲವರು ಯುಟ್ಯೂಬರ್ಸ್, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಹಾಗೂ ಸಾಮಾಜಿಕ ಕಾರ್ಯಕರ್ತರು ಎಂಬ ಮುಖವಾಡ ಧರಿಸಿ ಹಣ ವಸೂಲಿ ದಂಧೆಗೆ ಇಳಿದಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಸಣ್ಣಪುಟ್ಟ ತಪ್ಪು ಅಥವಾ ಲೋಪದೋಷಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಬಿಂಬಿಸುವುದಾಗಿ ಹೆದರಿಸಿ ಬ್ಲ್ಯಾಕ್ಮೇಲ್ ತಂತ್ರ ಅನುಸರಿಸಲಾಗುತ್ತಿದೆ. ಇನ್ನು ಮುಂದೆ ಇಂತಹ ಬೆದರಿಕೆಗಳಿಗೆ ಆಸ್ಪದವಿಲ್ಲ. ಯಾರೇ ಆಗಲಿ ಹಣ ವಸೂಲಿಗೆ ಇಳಿದರೆ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಎಚ್ಚರಿಸಿದರು.
ಕೇವಲ ಬ್ಲ್ಯಾಕ್ಮೇಲರ್ಗಳಿಗಷ್ಟೇ ಅಲ್ಲ, ಅಧಿಕಾರಿಗಳಿಗೂ ನಮ್ಮದೊಂದು ಸ್ಪಷ್ಟ ಸಂದೇಶವಿದೆ. ಎಲ್ಲಾ ಅಧಿಕಾರಿಗಳು ನಿಯಮಗಳ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ವಾಮಮಾರ್ಗಗಳನ್ನು ಸಂಪೂರ್ಣವಾಗಿ ಬಿಟ್ಟು, ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕೆ. ರಾಮರಾಜನ್ ಸಲಹೆ ನೀಡಿದರು.
ಮಾಧ್ಯಮಗಳ ಹೆಸರಿನಲ್ಲಿ ನಡೆಯುವ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿರುವ ಪೊಲೀಸ್ ಇಲಾಖೆ, ಇನ್ಮುಂದೆ ಅಧಿಕೃತ ಪತ್ರಕರ್ತರಿಗೆ ಮಾತ್ರ ಇಲಾಖೆಯ ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶ ನೀಡಲಿದೆ.
ಮಾಧ್ಯಮ ಸಂಸ್ಥೆಗಳ ಮಾನ್ಯತೆ ಇರುವ ಕರಡು ಅಥವಾ ಅಧಿಕೃತ ಗುರುತಿನ ಚೀಟಿ ಹೊಂದಿರುವ ಪತ್ರಕರ್ತರನ್ನು ಮಾತ್ರ ಸಭೆಗಳಿಗೆ ಆಹ್ವಾನಿಸಲಾಗುವುದು. ಯಾವುದೇ ಅಧಿಕೃತ ದಾಖಲೆ ಇಲ್ಲದ, ಅನಧಿಕೃತ ವ್ಯಕ್ತಿಗಳು ಇಲಾಖೆಯ ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕರು ಅಥವಾ ಅಧಿಕಾರಿಗಳು ಇಂತಹ ಯಾವುದೇ ಬೆದರಿಕೆಗಳಿಗೆ ಬಲಿಯಾಗದೆ, ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದರು.


