ಹನುಮಂತ ದೇವರ ಪಟ್ಟಿ ಕೊಡದ ಹಿನ್ನೆಲೆ ಜಮಖಂಡಿ ತಾಲೂಕಿನ ಹುಣಸೀಕಟ್ಟಿ ಗ್ರಾಮದ 7 ಕುಟುಂಬಸ್ಥರಿಗೆ ಬಹಿಷ್ಕಾರ ವಿಚಾರಕ್ಜೆ ಸಂಬಂಧಿಸಿದಂತೆ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಂಗುರ ಸಾರಿದ ವ್ಯಕ್ತಿ ಪ್ರಭು ಹೂಗಾರ ಹಾಗೂ ಗ್ರಾಮದ ಇತರರು ಎಂದು ಜಮಖಂಡಿ ಕಂದಾಯ ಅಧಿಕಾರಿ ಮಂಜುನಾಥ ದೊಡ್ಡಮನಿ ದೂರು ದಾಖಲು ಮಾಡಿದ್ದಾರೆ.
ಬಹಿಷ್ಕಾರ ಹಾಕಿದ ಗ್ರಾಮಸ್ಥರ ಹೆಸರು ಉಲ್ಲೇಖಿಸದೆ ಇತರರು ಎಂದು ಪ್ರಕರಣ ದಾಖಲಾಗಿದೆ. ಗ್ರಾಮದೇವರ ಪಟ್ಟಿ ಕೊಟ್ಟಿರುವುದಿಲ್ಲ ಅನ್ನುವ ಕಾರಣಕ್ಕೆ ಊರಲ್ಲಿನ ಕಿರಾಣಿ ಅಂಗಡಿ ,ಹಿಟ್ಟಿನ ಗಿರಣಿ, ದೇವಸ್ಥಾನದ ಕಡೆಗೆ ಬರದಂತೆ ನಿರ್ಬಂಧಿಸಿ. ಡಂಗುರ ಸಾರಿ ಸಾಮಾಜಿಕ ಬಹಿಷ್ಕಾರ ಹಾಕಿದ ಅಪರಾಧ ಎಂದು ಎಫ್ ಐ ಆರ್ ನಲ್ಲಿ ಉಲ್ಲೆಖಿಸಲಾಗಿದೆ.
ಹುಣಸಿಕಟ್ಟಿಯಲ್ಲಿ ಹನುಮಂತ ದೇವರ ಓಕಳಿ ಜಾತ್ರೆಗೆ 600 ರೂ. ಪಟ್ಟಿ ಹಣ ಕೊಡದ ಕಾರಣ ಹೇಳಿ ಡಂಗುರ ಸಾರಿ ಏಳು ಕುಟುಂಬವನ್ನು ಬಹಿಷ್ಕಾರ ಮಾಡಿದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ರೈಲ್ವೆ ಇಲಾಖೆ ನೌಕರ ಯಲ್ಲಪ್ಪ ಛಗಣ್ಣವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ ಕೊಲ್ಲೊಳ್ಳಿ, ಮಲ್ಲಪ್ಪ ಬಟಕುರ್ಕಿ, ರಾಮಪ್ಪ ಬಟಕುರ್ಕಿ ಎಂಬುವರ ಕುಟುಂಬ ಬಹಿಷ್ಕಾರಕ್ಕೆ ಒಳಗಾಗಿದೆ. ಈ ಏಳು ಕುಟುಂಬವನ್ನು ದೈವದಿಂದ ಹೊರಗಿಟ್ಟಿದ್ದೇವೆ ಎಂದು ಡಂಗುರ ಹಾಕಿದ ವಿಡಿಯೋ ಇದಾಗಿದೆ.
ಏಪ್ರಿಲ್ 2ರಂದು ಗ್ರಾಮದ ಹನುಮಂತ ದೇವರ ಓಕಳಿ ಜಾತ್ರೆ ಇತ್ತು. ಅದಕ್ಕೆ ಗ್ರಾಮದಲ್ಲಿ ಪಟ್ಟಿ ಸಂಗ್ರಹ ಮಾಡಲಾಗಿತ್ತು. ಆದರೆ ಈ ಏಳು ಕುಟುಂಬಗಳು ಹಣ ನೀಡಿಲ್ಲ. ಹಾಗಾಗಿ ಅವರ ಮನೆಗೆ ಸ್ವಾಮಿಗಳು, ಪೂಜಾರಿಗಳು ಹೋಗುವಂತಿಲ್ಲ. ಮನೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುವಂತಿಲ್ಲ. ಕಿರಾಣಿ ಅಂಗಡಿಯವರು ಈ ಕುಟುಂಬಗಳಿಗೆ ಏನು ಕೊಡುವ ಹಾಗಿಲ್ಲ ಎಂದು ಡಂಗುರ ಸಾರಲಾಗಿದೆ.
ಇದನ್ನು ಪ್ರಶ್ನೆ ಮಾಡಿ ರೈಲ್ವೆ ಇಲಾಖೆಯ ಸಿನಿಯರ್ ಟೆಕ್ನಿಷಿಯನ್ ಆಗಿರುವ ಯಲ್ಲಪ್ಪ ಛಗ್ಗಣ್ಣವರ ಎಂಬುವರು ಜಮಖಂಡಿ ತಹಸೀಲ್ದಾರ್, ಎಸಿ, ಡಿಸಿ ಅವರಿಗೆ ಪತ್ರ ಬರೆದು ನಮಗೆ ಅಪಮಾನವಾಗಿದೆ. ನಮ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕೂಡಲೇ ಡಂಗುರ ಸಾರಿದವರು ಹಾಗೂ ಡಂಗುರ ಸಾರಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ನಾನು ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯಲ್ಲಿ ನೌಕರರನಾಗಿದ್ದು, ಡಂಗುರ ಸಾರಿದ ವಿಡಿಯೋ ನನಗೆ ಎರಡು ದಿನದ ನಂತರ ತಲುಪಿದೆ. ಅದಾದ ನಂತರ ನಾನು ತಹಸೀಲ್ದಾರ್, ಎಸಿ, ಡಿಸಿ ಅವರಿಗೆ ಪತ್ರ ಬರೆದು ನಮಗೆ ಅಪಮಾನ ಮಾಡಿದವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಪತ್ರ ಬರೆದು ಆಗ್ರಹಿಸಿದ್ದೇನೆ. ಅಧಿಕಾರಿಗಳು ಹೋಗಿ ಸಭೆ ಮಾಡಿದ್ದಾರೆ. ರಾಜಿ ಸಂಧಾನ ಮಾಡಿಕೊಳ್ಳಿ ಎಂದಿದ್ದರು. ಆದರೆ ನನಗೆ ಯಾರು ಮಾತುಕತೆಗೆ ಕರೆದಿಲ್ಲ ಎಂದು ಯಲ್ಲಪ್ಪ ಛಗಣ್ಣವರ ಉದಯಕಾಲಕ್ಕೆ ತಿಳಿಸಿದ್ದರು.
ನಮಗೆ ಅಪಮಾನವಾಗಿದೆ. ನಮ್ಮ ಗೌರವಕ್ಕೆ ಧಕ್ಕೆ ಬಂದಿದೆ. ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾನು ಮಾಧ್ಯಮಗಳ ಮುಂದೆ ಬಂದಿದ್ದೇನೆ. ಮೊದಲು ಅಧಿಕಾರಿಗಳ ಗಮನಕ್ಕೆ ತಂದರೂ ಸರಿಯಾದ ಕ್ರಮ ಆಗದಿರುವುದು ಬೇಸರ ತರಿಸಿದೆ ಎಂದು ಯಲ್ಲಪ್ಪ ತಿಳಿಸಿದರು.


