ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವುದು, ಕಂದಾಯ ದಾಖಲೆಗಳನ್ನು ಬದಲಾಯಿಸುವುದು ಮತ್ತು ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿ ಎಂದು ಘೋಷಿಸಲು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರ(ಅರಣ್ಯ ಇಲಾಖೆ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, 2002ರ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಕಾಯ್ದೆಯ ಅನ್ವಯ, ಆಯೋಗವು ಕೇವಲ ತನಿಖೆ ನಡೆಸುವ, ಸಲಹೆ ನೀಡುವ, ಮೇಲ್ವಿಚಾರಣೆ ಮಾಡುವ ಮತ್ತು ಶಿಫಾರಸು ಮಾಡುವ ಅಧಿಕಾರವನ್ನು ಮಾತ್ರ ಹೊಂದಿದೆಯೇ ವಿನಃ ಸಿವಿಲ್ ನ್ಯಾಯಾಲಯದಂತೆ ಆಸ್ತಿ ಹಕ್ಕುಗಳ ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರ ಹೊಂದಿಲ್ಲ ಎಂದು ಪೀಠ ತಿಳಿಸಿದೆ.
ಜಮೀನು ಅರಣ್ಯ ಭೂಮಿಯೇ ಅಥವಾ ಅಲ್ಲವೇ ಎಂಬ ಗಂಭೀರ ಪ್ರಶ್ನೆಗಳು ಮತ್ತು ದಾಖಲೆಗಳ ವಿವಾದವಿರುವಾಗ, ಆ ಕುರಿತು ನಿರ್ಣಯಿಸುವ ಅಧಿಕಾರ ಆಯೋಗಕ್ಕಿಲ್ಲ. ಅಂತಹ ವಿಷಯಗಳನ್ನು ಸಮರ್ಥ ಪ್ರಾಧಿಕಾರಗಳು ಅಥವಾ ನ್ಯಾಯಾಲಯಗಳೇ ತೀರ್ಮಾನಿಸಬೇಕು. ಆಯೋಗದಲ್ಲಿ ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಮಾತ್ರಕ್ಕೆ, ಸಾಮಾನ್ಯ ಆಸ್ತಿ ಮತ್ತು ಕಂದಾಯ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ಆಯೋಗ ಚಲಾಯಿಸಲು ಬರುವುದಿಲ್ಲ ಎಂದು ತಿಳಿಸಿರುವ ಪೀಠ, ಆಯೋಗದ ಆದೇಶವನ್ನು ರದ್ದುಪಡಿಸಿದೆ.
ತುಮಕೂರು ಜಿಲ್ಲೆಯ ಸಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿಯ ಶೀಬಿ ಗ್ರಾಮದ ವಿವಿಧ ಸರ್ವೆ ನಂಬರ್ಗಳಿಗೆ ಸಂಬಂಧಿಸಿದ ಜಮೀನುಗಳ ಖಾತೆ ಹಾಗೂ ಸ್ವಾಧೀನದ ಕುರಿತು ದೂರು ದಾಖಲಾಗಿತ್ತು. ಈ ಜಮೀನುಗಳು ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ಅವುಗಳನ್ನು ಅರಣ್ಯ ಇಲಾಖೆಯ ದಾಖಲೆಗಳಿಂದ ಕೈಬಿಟ್ಟು, ಅರ್ಜಿದಾರರ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜ್ಯ ಎಸ್ಸಿ/ಎಸ್ಟಿ ಆಯೋಗವು 2023ರ ಮೇ 18ರಂದು ಆದೇಶ ಹೊರಡಿಸಿತ್ತು.
ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದರು.


