ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲಗರ್ಭಿಣಿ ಪ್ರಕರಣಗಳನ್ನು ಖಂಡಿಸಿ ಹಾಗೂ ಸ್ಥಗಿತಗೊಂಡಿರುವ ಸಾಮಾಜಿಕ ಭದ್ರತಾ ಪಿಂಚಣಿ ಹಣದ ಬಿಡುಗಡೆಗೆ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಮ್‌ಎಸ್‌ಎಸ್) ಯಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದೆ.
ಧಾರವಾಡ ಜಿಲ್ಲೆಯಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಬಾಲಗರ್ಭಿಣಿ ಪ್ರಕರಣಗಳು ಬೆಳಕಿಗೆ ಬಂದಿವೆ. ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಸುಮಾರು 1,691 ಪ್ರಕರಣಗಳು ದಾಖಲಾಗಿವೆ. ಇದು ಜನಸಾಮಾನ್ಯರಲ್ಲಿ ಆಘಾತ ಮತ್ತು ಆತಂಕವನ್ನುಂಟು ಮಾಡಿದೆ. ಹೆಣ್ಣು ಮಕ್ಕಳ ಮಾರಾಟ, ಪರಿಚಿತರು ಮತ್ತು ಹತ್ತಿರದ ಸಂಬಂಧಿಕರಿಂದಲೇ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಘಟನೆಗಳು ದಿನೇ-ದಿನೇ ಹೆಚ್ಚುತ್ತಿವೆ. ಮಾಧ್ಯಮದಲ್ಲಿನ ಅಶ್ಲೀಲತೆ, ಮದ್ಯ-ಮಾದಕಗಳ ಹಾವಳಿ ಇಂತಹ ಕುಕೃತ್ಯಗಳಿಗೆ ಮುಖ್ಯ ಕಾರಣಗಳಾಗಿವೆ ಎಂದು ವಿವರಿಸಲಾಗಿದೆ.
ಪರಿಣಾಮವಾಗಿ ಹೆಣ್ಣುಮಕ್ಕಳಿಗೆ ಅದರಲ್ಲೂ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಮನೆ, ಶಾಲೆ, ಟ್ಯೂಷನ್ ಹಾಗೂ ವಸತಿನಿಲಯಗಳು, ಇತರೇ ಸಾರ್ವಜನಿಕ ಸ್ಥಳಗಳು ಸೇರಿದಂತೆ ಎಲ್ಲಿಯೂ ಭದ್ರತೆ, ಸುರಕ್ಷತೆ ಇಲ್ಲದಂತಾಗಿದೆ. ಬಾಲ್ಯವಿವಾಹ. ಲೈಂಗಿಕ ದೌರ್ಜನ್ಯ ಮತ್ತು ಪ್ರೀತಿಯ ಹೆಸರಲ್ಲಿ ಮೋಸದಿಂದ ಬಾಲಕಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವಿಕೆಗಳಿಂದಾಗಿ ಬಾಲಗರ್ಭಿಣಿ ಪ್ರಕರಣಗಳು ಹೆಚ್ಚುತ್ತಿವೆ. ‘ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ (ಆರ್ ಸಿ ಎಚ್) ದಾಖಲೆಗಳ ಪ್ರಕಾರ ಬಾಲಗರ್ಭಿಣಿಯರಲ್ಲಿ 14 ರಿಂದ 18 ಸಂಖ್ಯೆಯೇ ಅತೀ ಹೆಚ್ಚು ಇದೆ ಎಂಬುದಾಗಿ ಸಂಗಟನೆ ಆತಂಕ ವ್ಯಕ್ತಪಡಿಸಿದೆ.
ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಗರ್ಭವತಿ ಮಾಡಿ ಅವರಿಗೆ ಹುಟ್ಟುವ ಮಕ್ಕಳನ್ನು ಮಾರಾಟ ಮಾಡುವ ವ್ಯವಸ್ಥಿತ ಜಾಲದ ಕುರಿತಾದ ಶಂಕೆಗೆ ಪುಷ್ಟಿ ನೀಡಿದ ಹಳೆ ಹುಬ್ಬಳ್ಳಿ ಮತ್ತು ಕಲಘಟಗಿ ಪ್ರಕರಣಗಳು ಜನರಲ್ಲಿ ಮತ್ತಷ್ಟು ಆತಂಕಸೃಷ್ಟಿಮಾಡಿವೆ. ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿರುವ ಒಂದೇ ಕುಟುಂಬದ ಅಪಾಪ್ತ ವಯಸ್ಕ ಸಹೋಹೋದರಿಯರಿಬ್ಬರೂ ಬಾಲಗರ್ಭಿಣಿಯರಾಗಿರುವುದು ನಾಗರಿಕ ಸಮಾಜವೇ ತಲೆತಗ್ಗಿಸಬೇಕಾದ ಹೇಯ ಘಟನೆ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.
ಹಣದ ಆಮಿಷ, ಲಾಭದಾಹಿ ಮನಸ್ಥಿತಿ, ನೈತಿಕ ಮಾನವೀಯ ಮೌಲ್ಯಗಳ ಕುಸಿತ, ಅಶ್ಲೀಲ ವೇಬೈಟ್ ವೀಕ್ಷಣೆ, ಹಳೆಯ ಪುರುಷ ಪ್ರಧಾನ ಮನೋಧೋರಣೆ ಇಂದು ಹೆಣ್ಣು ಮಕ್ಕಳ ದೇಹವನ್ನು ಭೋಗದ ಸರಕನ್ನಾಗಿ ಮಾಡಿದೆ. ಎಳೆಯ ವಯಸ್ಸಿನಲ್ಲಿ ಉತ್ತಮ ಶಿಕ್ಷಣ ಪಡೆದು, ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳಬೇಕಾದ ಹೆಣ್ಣುಮಕ್ಕಳು ಜಗತ್ತನ್ನು ಕಣ್ಣೆರೆದು ನೋಡುವ ಮೊದಲೇ ವ್ಯವಸ್ಥೆಯ ಕ್ರೂರತೆಗೆ ಬಲಿಯಾಗುತ್ತಿದ್ದಾರೆ. ಸರ್ಕಾರ ಮತ್ತು ಸಂಬಂಧಪಟ್ಟ ಜಿಲ್ಲಾಡಳಿತ ಇಂತಹ ಪ್ರಕರಣಗಳಲ್ಲಿ ಭಾಗಿಯಾದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಇಂತಹ ಕೃತ್ಯಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಐಎಮ್‌ಎಸ್‌ಎಸ್ ಮನವಿ ಸಲ್ಲಿಸಿತು. ಸ್ಥಗಿತಗೊಂಡಿರುವ ಬಡ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ತಲುಪಬೇಕಾದ ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಕೋರಿದೆ.
ಎಐಎಮ್‌ಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೋಕರೆ, ಜಿಲ್ಲಾ ಅಧ್ಯಕ್ಷರಾದ ಮದುಲತಾ ಗೌಡರ್. ಉಪಾಧ್ಯಕ್ಷರಾದ ದೇವಮ್ಮ ದೇವತ್ಕಲ್, ಜಿಲ್ಲಾ ಸಮಿತಿ ಸದಸ್ಯರಾದ ಪವಿತ್ರ ಮಾಳಾಪುರ, ನೀಲಮ್ಮ ಕಬಾಡಗಿ, ಅನುಸೂಯ ಚಿಕಮಠ, ವಿಜಯಲಕ್ಷ್ಮಿ ಹಿರೇಮರ್ ಮೊದಲಾದವರು ಉಪಸ್ಥಿತರಿದ್ದರು.


