Saturday, September 05, 2026
Menu

ರಾಜ್ಯದಲ್ಲಿ ಬರ: ಮನಮೋಹನ್‌ ಸಿಂಗ್‌ ಅವರಂತೆ ನರೇಂದ್ರ ಮೋದಿ ನೆರವಿಗೆ ಬರಲಿ ಎಂದ ಮುಖ್ಯಮಂತ್ರಿ ಶಿವಕುಮಾರ್‌

ಕೇಂದ್ರ ಸರ್ಕಾರದವರು ರೈತರ ಸಹಾಯಕ್ಕೆ ಬರಬೇಕು. ಇದು ಬಿಜೆಪಿಯವರ ಜವಾಬ್ದಾರಿ. ಅವರ ಶಾಸಕರು ಕೇಂದ್ರ ಸರ್ಕಾರ, ಪ್ರಧಾನಿ ಮೇಲೆ ಒತ್ತಾಯ ಮಾಡಿ ಸಾಲಮನ್ನಾ ಮಾಡಿಸಬೇಕು. ಹಿಂದೆ ನಮ್ಮ ಸರ್ಕಾರ ಮನಮೋಹನ್ ಸಿಂಗ್ ಅವರು ಮಾಡಿದರು, ಇವರು ಕೂಡ ಮಾಡಬೇಕು. ಬ್ಯಾಂಕ್ ಗಳು ಅವರ ಹಿಡಿತದಲ್ಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಶಿರೂರ್ ಗ್ರಾಮದಲ್ಲಿ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಬಳಿಕ ಮಾಧ್ಯಮಗಳಿಗೆ  ಪ್ರತಿಕ್ರಿಯೆ ನೀಡಿದರು. ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಭೇಟಿ ಕೊಟ್ಟಿದ್ದೇನೆ, ಎಲ್ಲೂ ಯಾವುದೇ ಬೆಳೆ ಸರಿಯಾಗಿ ಬಂದಿಲ್ಲ ಎಂದರು.

ಸೂರ್ಯಕಾಂತಿ ಇಲ್ಲ, ಮೆಣಸು ಇಲ್ಲ, ಹುರುಳಿ ಇಲ್ಲ, ತೊಗರಿ ಇಲ್ಲ. ಕೆಲವರು 20-30 ಎಕರೆ ಬಿತ್ತಿದ್ದಾರೆ, ವಿಮೆ ಮಾಡಿಸಿದ್ದೇವೆ ಎನ್ನುತ್ತಿದ್ದಾರೆ. ನಾನು ಅಧಿಕಾರಿಗಳು, ಶಾಸಕರ ಜೊತೆ ಚರ್ಚಿಸಿ ಪರಿಹಾರ ಏನು ಮಾಡಬಹುದು ಎಂದು ನೋಡುತ್ತೇನೆ. ಕೆಲವು ಕಡೆ ಬರ ಘೋಷಣೆ ಆಗಿದೆ, ಇನ್ನ ಕೆಲವು ಕಡೆ ಬರ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ, ಉಳುಮೆ, ಟ್ರಾಕ್ಟರ್ ಖರ್ಚು ಎಷ್ಟು ಬೀಳುತ್ತಿದೆ ಎಂದು ನಾನೇ ಖುದ್ದಾಗಿ ಅಧ್ಯಯನ ಮಾಡಿದ್ದೇನೆ. ಮುಂದೆ ಏನು ಸಹಾಯ ಮಾಡಬಹುದು ಎಂದು ಯೋಚಿಸುತ್ತಿದ್ದೇನೆ. ನೋಡಕ್ಕೆ ಹಸಿ ಇರುತ್ತೆ, ಆದರೆ ಬೆಳೆ ಇರಲ್ಲ. ಸೂರ್ಯಕಾಂತಿ ಒಣಗಿದೆ, ಮೆಣಸಿನಕಾಯಿಗೆ ರೋಗ ಬಂದಿದೆ. ಹಸಿರು ಇದ್ದ ಮಾತ್ರಕ್ಕೆ ಬೆಳೆ ಕೈಗೆ ಬಂದಂತೆ ಅಲ್ಲ ಎಂದು ಹೇಳಿದರು.

ಬೆಳೆ ವಿಮೆ ವಿಳಂಬದ ಬಗ್ಗೆ, ಹಿಂದಿನ ವಿಮೆ ಇನ್ನೂ ಬಂದಿಲ್ಲ, ಅದಕ್ಕೇ ಮೀಟಿಂಗ್ ಮಾಡುತ್ತಿದ್ದೇನೆ. ಅರ್ಧ ನೀರಾವರಿ, ಅರ್ಧ ಖುಷ್ಕಿ ಎಂದು ಲೆಕ್ಕ ಹಾಕುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ವರದಿ ಕಳಿಸಿದ್ದೇನೆ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಎರಡನೇ ಪಟ್ಟಿ ಪರಿಶೀಲಿಸುತ್ತಿದ್ದಾರೆ, ಆದಷ್ಟು ಬೇಗ ಘೋಷಣೆ ಮಾಡುತ್ತೇವೆ. ಫಸಲ್ ಬಿಮಾ ಯೋಜನೆಯಲ್ಲಿ ಬಾಗಲಕೋಟೆಯಲ್ಲಿ 30 ಕೋಟಿ ಹಗರಣ ಆಗಿದೆ, ಅಧಿಕಾರಿಗಳೇ ದೂರು ಕೊಟ್ಟು ಎಫ್ಐಆರ್ ಆಗಿದೆ, ಆದರೆ ಕ್ರಮ ಇಲ್ಲ, ಏಜೆಂಟ್‌ಗಳ ಜಾಲ ಇದೆ ಎಂದು ಮಾಧ್ಯಮಗಳು ಗಮನ ಸೆಳೆದಾಗ, “ಇದು ರಾಜ್ಯ ಮಟ್ಟದ ಜಾಲ, ವಿಮೆಯಲ್ಲಿ ದೊಡ್ಡ ಜಾಲ ಇದೆ. ವರದಿ ತರಿಸಿ ಬೆಂಗಳೂರಲ್ಲಿ ಮೀಟಿಂಗ್ ಮಾಡುತ್ತೇನೆ ಎಂದು ಹೇಳಿದರು.

ರೈತರಿಂದ ಸಿಎಂ ಮಾಹಿತಿ

ಮಳೆ ಬಂದು ಎಷ್ಟು ದಿನ ಆಯಿತು,  ಯಾವಾಗ ಬಿತ್ತನೆ ಮಾಡಿದ್ದು,  ಎಷ್ಟು ಖರ್ಚಾಯಿತು ಎಂದು ಬಾಗಲಕೋಟೆಯ ಹುನಗುಂದದ ರೈತ ನಂದೆಪ್ಪ ಸಂಗಪ್ಪ ಬಾರಕೇರ ಅವರಿಂದ ಸಿಎಂ  ಮಾಹಿತಿ ಪಡೆದರು.  ಬೆಳೆ ಹಾಳಾಗಿದೆ ಎಂದು ಯೋಚನೆ ಮಾಡಬೇಡಿ, ‌ನಾನು ಹಾಗೂ ನಮ್ಮ ಸರ್ಕಾರ ನಿಮ್ಮ ಜೊತೆಗಿರುವುದಾಗಿ ಧೈರ್ದೆಯ ಹೇಳಿದರು.ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ ನಿಮಗೆ ಎಂದು ಕೇಳಿದರು.

ರೈತ ನಂದೆಪ್ಪ ಅವರು, “ಸರ ಈ ವರ್ಷ ಒಳ್ಳೆ ಮಳೆ ಬರತೈತ್ರಿ ಅಂತ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆ ಹಾಕಿದ್ದೆ. ಯಾಕೋ ನಸೀಬು ಸರಿ ಇಲ್ಲಾರೀ” ಎಂದು ಬೇಸರಿಸಿದಾಗ, ರೈತನ ಹೆಗಲ ಮೇಲೆ ಕೈ ಇಟ್ಟು ನಾನಿದ್ದೇನೆ ಎಂದು ಆತ್ಮವಿಶ್ವಾಸ ತುಂಬಿದರು.ನಾನು ಕೇವಲ ಬರ ವೀಕ್ಷಣೆ ಮಾಡುತ್ತಿಲ್ಲ. ಉತ್ತರ ಕರ್ನಾಟಕ ಭಾಗದ ರೈತರ ಜೀವನ ದರ್ಶನ ಮಾಡುತ್ತಿದ್ದೇನೆ. ರೈತರ ಕಷ್ಟಗಳಿಗೆ ಸ್ಪಂದಿಸುವುದೇ ನನ್ನ  ಆದ್ಯತೆ ಎಂದರು.

ಹನುಮಂತ ಸಂಗಪ್ಪ ಹುನಗುಂದ ಅವರ ಜಮೀನಿಗೆ ಭೇಟಿ ನೀಡಿ ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿದರು. ಕೂಡಲಸಂಗಮಕ್ಕೆ ಆಗಮಿಸುವ ಮೊದಲು ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ವೈಮಾನಿಕ ವೀಕ್ಷಣೆ ಮಾಡಿಕೊಂಡು  ಬಂದಿದ್ದರು. ಗುಳೇದಗುಡ್ಡ  ಪದ್ಮಶ್ರೀ ಗಣಪತಿ ಪವಾರ ಅವರ ಜಮೀನಿಗೆ ಭೇಟಿ ನೀಡಿ ಸೂರ್ಯಕಾಂತಿ ತೆನೆಯನ್ನು ಕೈಯಲ್ಲಿ ಹಿಡಿದು ಕಾಳು ಎಷ್ಟು ಕಟ್ಟಿದೆ ಎಂದು ಪರೀಕ್ಷಿಸಿದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಸೂರ್ಯಕಾಂತಿ ಬೆಳೆಯ ಬಗ್ಗೆ ವಿವರಣೆ ನೀಡಿದರು.

ಕ್ಷೇತ್ರದಾದ್ಯಂತ ರಸ್ತೆಗುಂಟ ಸಾಗಿದ ಸಿಎಂ ಜಮೀನುಗಳನ್ನು ವೀಕ್ಷಣೆ ಮಾಡಿದರು. ಮಳೆಯಿಲ್ಲದೇ ಸೊರಗಿ ಹೋದ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ಎಷ್ಟು ಅಡಿಗೆ ಕೊಳವೆಬಾವಿಯಲ್ಲಿ ನೀರು ದೊರೆಯಲಿದೆ ಎಂದು ವಿಚಾರಿಸಿದರು.  ಶಿರೂರಿನ ಅಂದಾನೆಪ್ಪ ಕೋಟಿ ಅವರ ಜಮೀನಿಗೆ ಭೇಟಿ ನೀಡಿ ಮಳೆ ಇಲ್ಲದೆ  ಮೊಣಕಾಲುದ್ದ ಬೆಳೆದು ನಿಂತಿದ್ದ ತೊಗರಿ ಬೆಳೆ ನೋಡಿ, ಇಷ್ಟೊತ್ತಿಗಾಗಲೇ ತಲೆ ಮಟ್ಟಕ್ಕೆ ತೊಗರಿ ಗಿಡಗಳು ಬೆಳೆದು ನಿಂತಿರಬೇಕಿತ್ತು. ಆದರೆ ಪರಿಸ್ಥಿತಿ ನೋಡಿ ಹೇಗಿದೆ ಎಂದು  ಮಾಧ್ಯಮದವರಿಗೆ ತೋರಿಸಿದರು.

ಜಮೀನಿನ ಬಳಿ ನೆರೆದಿದ್ದ ರೈತರ ಅಹವಾಲು ಪಡೆದು,ಆಲಮಟ್ಟಿಯಿಂದ ಜಿಲ್ಲೆಯ ಹೆಚ್ಚಿನ ಭಾಗದ ಕೆರೆಗಳನ್ನು ತುಂಬಿಸಲು ಕ್ರಮವಹಿಸಲಾಗುವುದು. ಶಿರೂರು ಏತ ನೀರಾವರಿ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

Related Posts

Leave a Reply

Your email address will not be published. Required fields are marked *