ಮುಂಗಾರು ಮಳೆಯ ಕೊರತೆಯಿಂದ ನಗರದಲ್ಲಿ ನೀರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ನೀರಿನ ಸಮರ್ಪಕ ನಿರ್ವಹಣೆ ಮತ್ತು ಮಿತವ್ಯಯವನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್ಎಸ್ಬಿ) ಮೂರು ಮಹತ್ವದ ಆದೇಶಗಳನ್ನು ಜಾರಿಗೊಳಿಸಿದೆ.
ಸಮರ್ಪಕ ನೀರಿನ ಬಳಕೆ, ಅನಗತ್ಯ ಬಳಕೆಗೆ ತಡೆ ಹಾಗೂ ದೀರ್ಘಾವಧಿಯ ನೀರಿನ ಭದ್ರತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷೆ ಡಾ. ಮಂಜುಳಾ ತಿಳಿಸಿದ್ದಾರೆ.
ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು, ಕೈಗಾರಿಕೆಗಳು ಸೇರಿದಂತೆ ನೀರು ಬಳಸುವ ಎಲ್ಲ ಕಟ್ಟಡಗಳಲ್ಲಿ ಏರೇಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಏರೇಟರ್ ಅಳವಡಿಕೆಯಿಂದ ನೀರಿನ ಬಳಕೆಯನ್ನು ಶೇ.30 ರಿಂದ 50ರವರೆಗೆ ಕಡಿಮೆ ಮಾಡಬಹುದು. ಇದರಿಂದ ನೀರಿನ ಬಳಕೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ವಾಹನ ತೊಳೆಯುವುದು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸ್ವಚ್ಛ, ಕಟ್ಟಡ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಕುಡಿಯುವ ನೀರಲ್ಲದ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇಂತಹ ಅಗತ್ಯಗಳಿಗೆ ಕಡ್ಡಾಯವಾಗಿ ಸಂಸ್ಕರಿತ ನೀರನ್ನೇ ಬಳಸಬೇಕು.
ನಗರದಲ್ಲಿನ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳನ್ನು ಕುಡಿಯುವ ನೀರಿನಿಂದ ತುಂಬಿಸುವುದನ್ನು ನಿಷೇಧಿಸಲಾಗಿದೆ. ಈಜುಕೊಳಗಳಿಗೆ ಅಗತ್ಯ ಇರುವ ನೀರನ್ನು ಸಂಸ್ಕರಿತ ನೀರು ಅಥವಾ ಇತರ ಪರ್ಯಾಯ ಮೂಲಗಳಿಂದಲೇ ಬಳಸುವಂತೆ ಸೂಚಿಸಲಾಗಿದೆ.
ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ–1964ರ ಅನ್ವಯ ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇಕಡಾ 50 ರವರೆಗೆ ಕಡಿತಗೊಳಿಸಿ 5,000 ರೂ ದಂಡ ವಿಧಿಸಲಾಗುವುದು. ಉಲ್ಲಂಘನೆ ಮುಂದುವರಿದಲ್ಲಿ ನಿತ್ಯ 500ರೂ ಹೆಚ್ಚುವರಿ ದಂಡ ವಿಧಿಸುವುದರ ಜೊತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕುಡಿಯುವ ನೀರು ಪ್ರತಿಯೊಬ್ಬರಿಗೂ ಸೇರಿದ ಅಮೂಲ್ಯ ನೈಸರ್ಗಿಕ ಸಂಪತ್ತು. ಅದರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಜವಾಬ್ದಾರಿಯುತವಾಗಿ ಬಳಸಿ, ಏರೇಟರ್ ಅಳವಡಿಸಿ, ಕುಡಿಯುವ ನೀರಿನ ದುರ್ಬಳಕೆ ತಪ್ಪಿಸಿ ಜಲ ಸಂರಕ್ಷಣೆಯ ಜನಾಂದೋಲನಕ್ಕೆ ಕೈಜೋಡಿಸಬೇಕು ಎಂದು ಮಂಜುಳಾ ಹೇಳಿದರು.
ನಾಗರಿಕರ ಸಹಭಾಗಿತ್ವದಿಂದಲೇ ನೀರಿನ ಸಂರಕ್ಷಣೆ ಸಾಧ್ಯ. ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಜಲಮಂಡಳಿ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.


