ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಪೋಪ್ ಲಿಯೋ ಟೀಕಿಸಿದ್ದು, ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಮತ್ತು ಇದು ಅನೈತಿಕ ಎಂದು ಹೇಳಿರುವುದಕ್ಕೆ ಡೊನಾಲ್ಟ್ ಟ್ರಂಪ್ ಪೋಪ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಟ್ರಂಪ್ ಮತ್ತು ಕ್ಯಾಥೋಲಿಕ್ ಧರ್ಮಗುರು ಪೋಪ್ ಲಿಯೋ ನಡುವೆ ವಾಕ್ಸಮರತೀವ್ರಗೊಂಡಿದ್ದು, ಇದು ಜಾಗತಿಕ ಹಾಗೂ ಧಾರ್ಮಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಲ್ಲಿ, ಲಿಯೋ ಅವರನ್ನು ಅಪರಾಧ ವಿಷಯದಲ್ಲಿ ದುರ್ಬಲ ಹಾಗೂ ವಿದೇಶಾಂಗ ನೀತಿಯಲ್ಲಿ ದುರ್ಬಲ ಎಂದು ಟೀಕಿಸಿದ್ದಾರೆ. ಲಿಯೋ ಪೋಪ್ ಆಗಿ ಆಯ್ಕೆಯಾಗಲು ನನ್ನ ರಾಜಕೀಯ ಪ್ರಭಾವವೇ ಕಾರಣ. ನಾನು ಶ್ವೇತಭವನದಲ್ಲಿ ಇಲ್ಲದಿದ್ದರೆ, ಲಿಯೋ ವ್ಯಾಟಿಕನ್ನಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಪೋಪ್ ತೀವ್ರ ಎಡಪಂಥೀಯರ ಪರವಾಗಿ ವರ್ತಿಸುತ್ತಿದ್ದಾರೆಂದು ಹೇಳಿರುವ ಟ್ರಂಪ್, ಅವರು ಒಬ್ಬ ರಾಜಕಾರಣಿಯಂತೆ ವರ್ತಿಸುವುದನ್ನು ಬಿಟ್ಟು ಧರ್ಮಗುರುವಿನ ಕೆಲಸ ಮಾಡಲಿ ಎಂದು ಹೇಳಿದ್ದಾರೆ. ನಾನು ಪೋಪ್ ಲಿಯೋ ಅವರ ಅಭಿಮಾನಿ ಅಲ್ಲ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲಿ ಎಂದು ಒಪ್ಪುವ ಪೋಪ್ ನನಗೆ ಬೇಡ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ದೇಶದ ಭದ್ರತೆಗಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ಟೀಕಿಸುವುದು ಸರಿಯಲ್ಲ ಎಂದಿದ್ದಾರೆ.
ಅಮೆರಿಕದ ಕ್ಯಾಥೋಲಿಕ್ ಬಿಷಪ್ಗಳ ಸಮಿತಿಯ ಅಧ್ಯಕ್ಷ ಪಾಲ್ ಎಸ್. ಕೋಕ್ಲಿ ಟ್ರಂಪ್ ಪೋಸ್ಟ್ಗೆ ಪ್ರತಿಕ್ರಿಯಿಸಿ, ಪೋಪ್ ರಾಜಕೀಯ ನಾಯಕನಲ್ಲ, ಅವರು ಧಾರ್ಮಿಕ ಮಾರ್ಗದರ್ಶಕ ಎಂದು ಹೇಳಿದ್ದಾರೆ. ಪೋಪ್ ಲಿಯೋ ಅಮೆರಿಕ ಮೂಲದ ಮೊದಲ ಪೋಪ್ ಆಗಿದ್ದಾರೆ. ಅವರು ಯುದ್ಧದ ಜೊತೆಗೆ ವಲಸಿಗರ ಮೇಲಿನ ಅಮೆರಿಕದ ಕಠಿಣ ಕ್ರಮಗಳನ್ನು ಕೂಡ ವಿರೋಧಿಸುತ್ತಾ ಬಂದಿದ್ದಾರೆ. ಪೋಪ್ ಲಿಯೋ ಅವರ ಪ್ರಸ್ತುತದ ನಿಲುವು ಟ್ರಂಪ್ ಆಡಳಿತದ ಯುದ್ಧ ನೀತಿ ಹಾಗೂ ವಲಸೆ ನೀತಿಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.


