Menu

ದಸರಾ ರಜೆ ಹತ್ತಿರವಾದರೂ ಪಿಯು ಮಕ್ಕಳಿಗೆ ಪಠ್ಯಪುಸ್ತಕಗಳಿಲ್ಲ: ಆರ್‌ ಅಶೋಕ ಕಿಡಿ

ಬೇಸಿಗೆ ರಜೆ ಕಳೆದು ಕಾಲೇಜು ಆರಂಭವಾಗಿ  ದಸರಾ ರಜೆ ಹತ್ತಿರವಾದರೂ ಪಿಯು ಮಕ್ಕಳಿಗೆ ಪಠ್ಯಪುಸ್ತಕಗಳು ತಲುಪಿಲ್ಲ. ಅವು ಗೋದಾಮಿನಲ್ಲೇ ಗೆದ್ದಲು ಹಿಡಿಯುತ್ತಿವೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಸರ್ಕಾರದ ಕಾರೈವೈಖರಿ ವಿರುದ್ಧ ಕಿಡಿ ಕಾರಿದ್ದಾರೆ.

ರಾಜ್ಯದ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಮತ್ತು ದಕ್ಷತೆಯ ಕೊರತೆಯಿಂದಾಗಿ ಸಾವಿರಾರು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಲೆಯಲ್ಲಿದೆ. ತರಗತಿಗಳು ಆರಂಭವಾಗಿ ತಿಂಗಳುಗಳೇ ಕಳೆದು, ದಸರಾ ರಜೆ ಹತ್ತಿರ ಬರುತ್ತಿದ್ದರೂ ಇಂದಿಗೂ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳ ಪಠ್ಯಪುಸ್ತಕಗಳು ತಲುಪಿಲ್ಲ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮುದ್ರಣಗೊಂಡು ಸಿದ್ಧವಾಗಿರುವ ಲಕ್ಷಾಂತರ ಪಠ್ಯಪುಸ್ತಕಗಳು ಇಲಾಖೆಯ ಗೋದಾಮಿನಲ್ಲೇ ಉಳಿದುಕೊಂಡಿವೆ. ಇವುಗಳನ್ನು ಕಾಲೇಜುಗಳಿಗೆ ಸರಬರಾಜು ಮಾಡಲು ಸರ್ಕಾರದ “ಆಡಳಿತಾತ್ಮಕ ಅನುಮೋದನೆ” ಬೇಕಂತೆ. ಖಾಸಗಿ ಹಾಗೂ ಸರ್ಕಾರಿ ವಿದ್ಯಾರ್ಥಿಗಳ ನಡುವೆ ತಾರತಮ್ಯ: ಹಣ ತೆತ್ತು ಪುಸ್ತಕ ಖರೀದಿಸುವ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯ ಲಭ್ಯವಾಗಿದೆ. ಸರ್ಕಾರ ಉಚಿತ ಪುಸ್ತಕಗಳನ್ನು ಸಂಪೂರ್ಣವಾಗಿ ನೆಚ್ಚಿಕೊಂಡಿರುವ ಶೇ.75ರಷ್ಟು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಲ್ಲದೆ ಪರದಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಈಗಾಗಲೇ ಹಲವು ಕಿರು ಪರೀಕ್ಷೆಗಳು (Unit Tests) ಮುಗಿದಿದ್ದು, ಅರ್ಧ ವಾರ್ಷಿಕ ಪರೀಕ್ಷೆಗಳು ಎದುರಾಗುತ್ತಿವೆ. ಪಠ್ಯಪುಸ್ತಕಗಳೇ ಇಲ್ಲದೆ ವಿದ್ಯಾರ್ಥಿಗಳು ಹೇಗೆ ತಾನೇ ಪರೀಕ್ಷೆ ಬರೆಯಲು ಸಾಧ್ಯ, ಉಪನ್ಯಾಸಕರು ಪುಸ್ತಕಗಳಿಲ್ಲದೆ ತರಗತಿಗಳಲ್ಲಿ ಪಾಠ ಮಾಡುವುದು ಹೇಗೆ ಮತ್ತು ಡಿಸೆಂಬರ್ ಒಳಗಾಗಿ ಪಠ್ಯಕ್ರಮವನ್ನು ಪೂರ್ಣಗೊಳಿಸುವುದು ಹೇಗೆ  ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ @DKShivakumar ಅವರೇ, ಶಿಕ್ಷಣ ಇಲಾಖೆಯನ್ನು ತಕ್ಷಣವೇ ನಿದ್ರೆಯಿಂದ ಎಬ್ಬಿಸಿ, ಗೋದಾಮಿನಲ್ಲಿ ಕೊಳೆಯುತ್ತಿರುವ ಪಠ್ಯಪುಸ್ತಕಗಳನ್ನು ಪ್ರತಿಯೊಂದು ಸರ್ಕಾರಿ ಕಾಲೇಜಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.ಇಲ್ಲದಿದ್ದರೆ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *