ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಮಹಿಳಾ ಶಾಕರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ವಿಧಾನಸೌಧ ಆವರಣದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಹಿಳಾ ವಿರೋಧಿ ಎಂದು ಟೀಕಿಸಿ ಫಲಕಗಳನ್ನು ಹಿಡಿದುಕೊಂಡು ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಬಿಜೆಪಿಯ ಮಹಿಳಾ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ವಿಧಾನಸೌಧದ ಆವರಣದ ಪ್ರವೇಶದ್ವಾರದ ಬಳಿಯಿರುವ ಭುವನೇಶ್ವರಿ ಪ್ರತಿಮೆ ಸಮೀಪ ಬಿಜೆಪಿ ಶಾಸಕರು ಸೇರಿ ವಿಧಾನಸೌಧದತ್ತ ಮೆರವಣಿಗೆ ನಡೆಸಿದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಎರಡು ತಿಂಗಳ ಬಳಿಕ ಆಗಸ್ಟ್ 3ರಂದು ಶಿವಕುಮಾರ್ 19 ಸಚಿವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿ ಸಂಪುಟ ವಿಸ್ತರಿಸಿದರು. ಸಂಪುಟದ ಒಟ್ಟು ಸದಸ್ಯರ ಸಂಖ್ಯೆ 33ಕ್ಕೆ ಏರಿಕೆಯಾಯಿತು. ಆದರೆ ಸಂಪುಟದಲ್ಲಿ ಮಹಿಳಾ ಸಚಿವರಿಲ್ಲ. ಎಂದು ಬಿಜೆಪಿ ಶಾಸಕರು ದೂರಿದರು.


