ಕಮಿಷನ್ ಮಾಸ್ಟರ್ (CM) @DKShivakumar ಅವರೇ, “ರಾಜ್ಯದಲ್ಲಿ ಬರಗಾಲ ಎದುರಿಸಲು ಸಜ್ಜಾಗಿ” ಎಂದು ಮಾಧ್ಯಮಗಳಿಗೆ ಪೋಸ್ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಬರಗಾಲ ಎದುರಿಸೋಕೆ, ರೈತರ ಕಷ್ಟ ಕೇಳೋಕೆ ರಾಜ್ಯದಲ್ಲಿ ಕೃಷಿ ಸಚಿವರು ಎಲ್ಲಿದ್ದಾರೆ ಸ್ವಾಮಿ?, ನೀವೇ ಒಪ್ಪಿಕೊಂಡಿರುವಂತೆ ರಾಜ್ಯದಲ್ಲಿ ಇನ್ನು ಶೇ. 30 ರಷ್ಟು ಮಳೆಯೂ ಆಗಿಲ್ಲ. ಪರಿಸ್ಥಿತಿ ಹೀಗಿರುವಾಗ ಬರೀ ಎಸಿ ಕೋಣೆಯಲ್ಲಿ ಕೂತು ಕಾಟಾಚಾರದ ಸಭೆ ನಡೆಸಿದರೆ, ಮಾಧ್ಯಮಗಳಿಗೆ ಒಂದು ಹಾರಿಕೆಯ ಹೇಳಿಕೆ ಕೊಟ್ಟುಬಿಟ್ಟರೆ ಬರ ನೀಗುತ್ತದೆಯೇ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರೈತರ ಕಷ್ಟ ಕೇಳೋಕೆ ರಾಜ್ಯದಲ್ಲಿ ಕೃಷಿ ಸಚಿವರು ಎಲ್ಲಿದ್ದಾರೆ ಸ್ವಾಮಿ, ಬರಪೀಡಿತ ತಾಲೂಕುಗಳಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೆ ತತ್ತರಿಸುತ್ತಿದ್ದಾರೆ. ಈ ತಾಪತ್ರಯ ವಿಚಾರಿಸಬೇಕಾದ ನಿಮ್ಮ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಎಲ್ಲಿದ್ದಾರೆ ಸ್ವಾಮಿ, ನಿಮ್ಮದೇ ಶಾಸಕರ ಮುನಿಸು, ಆಂತರಿಕ ಅಸಮಾಧಾನವನ್ನು ಎದುರಿಸಲಾಗದೆ ಮುಕ್ಕಾಲು ಸಂಪುಟವನ್ನು ಖಾಲಿ ಇಟ್ಟುಕೊಂಡಿರುವ ತಾವು ರಾಜ್ಯದ ಬರಗಾಲ ಎದುರಿಸುತ್ತೀರಿ ಎಂದು ಕನ್ನಡಿಗರು ಹೇಗೆ ತಾನೇ ನಂಬಿಯಾರು ಎಂದು ಪ್ರಶ್ನಿಸಿದ್ದಾರೆ.
ಕಮಿಷನ್ ಮಾಸ್ಟರ್ (CM) @DKShivakumar ಅವರೇ,
"ರಾಜ್ಯದಲ್ಲಿ ಬರಗಾಲ ಎದುರಿಸಲು ಸಜ್ಜಾಗಿ" ಎಂದು ಮಾಧ್ಯಮಗಳಿಗೆ ಪೋಸ್ ಕೊಟ್ಟರೆ ಏನೂ ಪ್ರಯೋಜನವಿಲ್ಲ. ನೀವೇ ಒಪ್ಪಿಕೊಂಡಿರುವಂತೆ ರಾಜ್ಯದಲ್ಲಿ ಇನ್ನು ಶೇ. 30 ರಷ್ಟು ಮಳೆಯೂ ಆಗಿಲ್ಲ. ಪರಿಸ್ಥಿತಿ ಹೀಗಿರುವಾಗ ಬರೀ ಎಸಿ ಕೋಣೆಯಲ್ಲಿ ಕೂತು ಕಾಟಾಚಾರದ ಸಭೆ ನಡೆಸಿದರೆ, ಮಾಧ್ಯಮಗಳಿಗೆ ಒಂದು… pic.twitter.com/HrWXruSGBf
— R. Ashoka (@RAshokaBJP) June 16, 2026
ಅಧಿಕಾರದ ಹಪಾಹಪಿಗೆ ಬಿದ್ದು ಆಡಳಿತವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ ಕೇವಲ ಅಸಹಾಯಕ, ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಗಳಾಗಿ ನೀವು ಇತಿಹಾಸ ಸೇರುತ್ತೀರಿ. ಈ ಪೊಳ್ಳು ಹೇಳಿಕೆಗಳನ್ನು ಕೊಡುವುದು ಬಿಟ್ಟು, ತಕ್ಷಣವೇ ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ಮಾಡಿ ಬರ ಪರಿಹಾರ ಕಾರ್ಯಕ್ಕೆ ಮಂತ್ರಿಗಳನ್ನು ಹಳ್ಳಿ ಹಳ್ಳಿಗಳಿಗೆ ಇಳಿಸಿ, ಇಲ್ಲದಿದ್ದರೆ ಕನ್ನಡಿಗರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿ, ಅನ್ನದಾತ ಮುಂದೇನು ಎಂಬ ಭೀತಿಯಲ್ಲಿ ಆಕಾಶದ ಕಡೆ ಮುಖ ಮಾಡಿ ಕೂತಿದ್ದಾನೆ. ಆದರೆ ಇಂತಹ ಭೀಕರ ಪರಿಸ್ಥಿತಿಯಲ್ಲೂ ರಾಜ್ಯದ ಅತ್ಯಂತ ಪ್ರಮುಖವಾದ ಕೃಷಿ ಇಲಾಖೆಗೆ ಒಬ್ಬ ಪೂರ್ಣಾವಧಿ ಸಚಿವರನ್ನು ನೇಮಿಸಲು ಈ ಲಜ್ಜೆಗೆಟ್ಟ @INCKarnataka ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ಅವರು, ಮಾಸ್ಟರ್ (ಸಿಎಂ) @DKShivakumar ಅವರೇ, ನಿಮ್ಮ ಈ ಅಸಹಾಯಕ ‘ರಬ್ಬರ್ ಸ್ಟಾಂಪ್’ ಆಡಳಿತಕ್ಕೆ ನಾಡಿನ ರೈತರು ಬಲಿಯಾಗಬೇಕೇ? ಸಂಪುಟ ವಿಸ್ತರಣೆಗೆ ಕೈಹಾಕಿದರೆ ಶಾಸಕರು ಮುನಿಸಿಕೊಂಡು ತಾವು ಅತ್ತು ಸುರಿದು ದಕ್ಕಿಸಿಕೊಂಡ ಕುರ್ಚಿಯೇ ಅಲ್ಲಾಡಿ, ಸರ್ಕಾರವೇ ಬಿದ್ದು ಹೋಗುತ್ತದೆ ಎಂಬ ಭಯ ನಿಮ್ಮನ್ನು ಅಷ್ಟೊಂದು ಕಾಡುತ್ತಿದೆಯೇ ಎಂದು ಕುಟುಕಿದ್ದಾರೆ.
ಒಂದು ಸಚಿವ ಸಂಪುಟವನ್ನು ಭರ್ತಿ ಮಾಡುವ ಧೈರ್ಯ, ಯೋಗ್ಯತೆ, ತಾಕತ್ತು ಇಲ್ಲದ ನೀವು, ರಾಜ್ಯದ ಮುಖ್ಯಮಂತ್ರಿ ಆಗಿರುವುದು ಸ್ವಾಭಿಮಾನಿ ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹ. ಒಂದು ಕಡೆ ಹೈಕಮಾಂಡ್ ಗುಲಾಮಗಿರಿಯ ಅಸಹಾಯಕತೆ, ಮತ್ತೊಂದು ಕಡೆ ಆಂತರಿಕ ಬಂಡಾಯದ ನಡುಕ, ಅಧಿಕಾರದ ಮೇಲಿನ ನಿಮ್ಮ ಹಿಡಿತವನ್ನು ಸಂಪೂರ್ಣವಾಗಿ ಸಡಿಲಗೊಳಿಸಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದಿದ್ದಾರೆ.
ನೆನಪಿಡಿ, ರೈತರನ್ನು ನಿರ್ಲಕ್ಷ್ಯ ಮಾಡಿದ ಯಾವ ಸರ್ಕಾರವೂ ಉಳಿದ ಇತಿಹಾಸವಿಲ್ಲ, ಅನ್ನದಾತನ ಶಾಪ ಸುಮ್ಮನೆ ಬಿಡುವುದಿಲ್ಲ. ಈ ಕೊಡಲೇ ದೆಹಲಿಗೆ ಹೊರಟು ಹೈಕಮಾಂಡ್ ಕಾಲಿಗೆ ಬಿದ್ದು ಪರಿಸ್ಥಿತಿ ವಿವರಿಸಿ, ತಕ್ಷಣವೇ ಒಬ್ಬ ಸಮರ್ಥ ಕೃಷಿ ಸಚಿವರನ್ನು ನೇಮಿಸಿ. ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಸರ್ಕಸ್ ನಲ್ಲಿ ಆಡಳಿತವನ್ನ ನಿರ್ಲಕ್ಷ್ಯ ಮಾಡದೆ ತಕ್ಷಣ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಆಗ್ರಹಿಸಿದ್ದಾರೆ.


