ರಾಯಚೂರು ಜಿಲ್ಲೆಯಲ್ಲಿ ದಲಿತರ ಮೇಲಿನ ಕೊಲೆ, ಅತ್ಯಾಚಾರ ಸೇರಿದಂತೆ ಗಂಭೀರ ಪ್ರಕರಣಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಕರಡಕಲ್ ಗ್ರಾಮದ ರಾಣೆಮ್ಮ ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಗೃಹ ಸಚಿವರಾಗಿ ಕಾರ್ಯನಿರ್ವಹಿಸಲು ಅವರಲ್ಲಿ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.
ರಾಯಚೂರು ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದವರ ಮೇಲೆ ಕೊಲೆ, ಅತ್ಯಾಚಾರ ಸೇರಿದಂತೆ ಹಲವು ಗಂಭೀರ ಘಟನೆಗಳು ನಡೆದಿವೆ. ಇಂತಹ ಪ್ರಕರಣಗಳ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಸಮಗ್ರ ಚರ್ಚೆಯಾಗಬೇಕಿತ್ತು. ಆದರೆ ಅಧಿವೇಶನವನ್ನು ಮುಂಚಿತವಾಗಿಯೇ ಮೊಟಕುಗೊಳಿಸಿದ್ದರಿಂದ ಈ ವಿಚಾರ ಚರ್ಚೆಗೆ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರಡಕಲ್ ಗ್ರಾಮದ ರಾಣೆಮ್ಮ ಕುಟುಂಬಕ್ಕೆ ಸರ್ಕಾರ ತಕ್ಷಣ ಎರಡು ಎಕರೆ ಜಮೀನು ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಈ ಬೇಡಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ನಾರಾಯಣಸ್ವಾಮಿ ತಿಳಿಸಿದರು.
ಜಿಲ್ಲೆಯಲ್ಲಿ ಡ್ರಗ್ಸ್ ಮತ್ತು ಗಾಂಜಾ ಮಾರಾಟ ಹೆಚ್ಚಾಗುತ್ತಿರುವುದರಿಂದ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಕುಟುಂಬಗಳು ನಾಶವಾಗುತ್ತಿದ್ದು, ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಅಧಿಕಾರಿಗಳು ನೀಡುವ ವರದಿಯನ್ನು ಮಾತ್ರ ಆಧರಿಸಿ ಸರ್ಕಾರ ಕಾರ್ಯನಿರ್ವಹಿಸಬಾರದು. ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ಸಮಗ್ರ ವರದಿ ನೀಡಬೇಕು. ಆದರೆ ಅಧಿಕಾರಿಗಳು ಪೋಸ್ಟ್ಮನ್ ಕೆಲಸ ಮಾಡುತ್ತಿರುವಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಯಚೂರು ಜಿಲ್ಲೆಯ ಅಶ್ವಿನಿ, ರಾಣೆಮ್ಮ ಹಾಗೂ ಭೂಮಾನಂದ ಪ್ರಕರಣಗಳು ನಡೆದ ಸ್ಥಳಗಳಿಗೆ ಶೀಘ್ರದಲ್ಲೇ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳು ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಗುವುದು. ಬಳಿಕ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ಹೇಳಿದರು.
ದಲಿತರು ಸೇರಿದಂತೆ ಎಲ್ಲ ಸಮುದಾಯಗಳ ಜನರಿಗೆ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿ. ಗಂಭೀರ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಹಾಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದು ನಾರಾಯಣಸ್ವಾಮಿ ಆಗ್ರಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಜಲ್ದಾರ್, ರುದ್ರಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ, ಜಗನ್ನಾಥ ಸೇರಿದಂತೆ ಇದ್ದರು.


