ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಸಂರಕ್ಷಿಸಿರುವ ಹುತಾತ್ಮರ ಸ್ಮಾರಕಕ್ಕೆ ಮುಖ್ಯಮಂತ್ರಿ ಪ್ರಜಾ ಸೇವಕ ಡಿಕೆ ಶಿವಕುಮಾರ್ ಶನಿವಾರ ಪುಷ್ಪ ನಮನ ಸಲ್ಲಿಸಿದರು.
ಕೂಡ್ಲಿಗಿಗೆ ಆಗಮಿಸಿದ ಮುಖ್ಯಮಂತ್ರಿ ಅವರು ಮೊದಲು ಹುತಾತ್ಮರ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸಿ, ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು.
ನಂತರ ಮುಖ್ಯಮಂತ್ರಿ ಪಟ್ಟಣದಲ್ಲಿ ಆಯೋಜಿಸಿದ್ದ ‘ಪ್ರಜಾ ಸೇವಾ’ ಆಂದೋಲನ ಕಾರ್ಯಕ್ರಮದತ್ತ ತೆರಳಿದರು. ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಕ್ರೀಡಾಂಗಣ ಹಾಗೂ ಕಾರ್ಯಕ್ರಮದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ತಾಲೂಕಿನ ವಿವಿಧ ಗ್ರಾಮಗಳಿಂದ ಬೆಳಗ್ಗಿನಿಂದಲೇ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ‘ಪ್ರಜಾ ಸೇವಾ’ ಆಂದೋಲನ ಕಾರ್ಯಕ್ರಮ ಸ್ಥಳದತ್ತ ಆಗಮಿಸುತ್ತಿದ್ದರು. ಸಮಯ ಕಳೆದಂತೆ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ವೇದಿಕೆಯ ಮುಂಭಾಗದ ಆವರಣ ಸಂಪೂರ್ಣವಾಗಿ ಭರ್ತಿಯಾಗಿತ್ತು.


