Menu

ಆ.15ರೊಳಗೆ 5927 ಗ್ರಾ.ಪಂ.ಗಳಿಗೆ ಮಹಾತ್ಮಾಗಾಂಧಿ ಹೆಸರು: ಈಶ್ವರ ಖಂಡ್ರೆ

ಆಗಸ್ಟ್ 15ರ ಸ್ವಾತಂತ್ರ್ಯದಿನದೊಳಗೆ ರಾಜ್ಯದ ಎಲ್ಲ 5927 ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಾ ಗಾಂಧಿ  ಗ್ರಾಮ ಪಂಚಾಯತಿ ಎಂದು ನಾಮಕರಣ ಮಾಡಲು ಗಡುವು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ   ಇಲಾಖೆಯ ಆಯುಕ್ತಾಲಯದ ಪಿಡಿಒ, ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ವರ್ಗಾವಣೆ ಕೌನ್ಸಲಿಂಗ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀ ಹೆಸರನ್ನು ಚಿರಸ್ಥಾಯಿಗೊಳಿಸಲು 2026-27ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 279ರಲ್ಲಿ ಘೋಷಣೆ ಮಾಡಿರುವಂತೆ ಎಲ್ಲ ಪಂಚಾಯ್ತಿಗಳ ಹೆಸರು ಬದಲಾವಣೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಗ್ರಾಮ ಸ್ವರಾಜ್ಯದ ಪ್ರತಿಪಾದಕರಾಗಿದ್ದ ರಾಷ್ಟ್ರಪಿತ ಗಾಂಧೀ ಗೌರವಾರ್ಥ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ -ಮನ್ರೇಗಾ ಎಂದು ಹೆಸರಿಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಜುಲೈ 1ರಿಂದ ಜಾರಿಗೆ ತಂದಿರುವ ವಿ ಬಿ ಜಿ ರಾಮ್ ಜಿಯಲ್ಲಿ ಮಹಾತ್ಮಾ ಗಾಂಧೀ ಹೆಸರನ್ನೇ ತೆಗೆದು ಹಾಕಿದೆ. ಹೀಗಾಗಿ ರಾಜ್ಯ ಸರ್ಕಾರ ಎಲ್ಲ ಪಂಚಾಯತಿಗಳಿಗೆ ಗಾಂಧಿ ಹೆಸರಿಡಲು ತೀರ್ಮಾನಿಸಿದೆ ಎಂದರು.

ತಾವು ಕಳೆದ ತಿಂಗಳು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಸಮಾವೇಶದಲ್ಲಿ ದೇಶದಲ್ಲಿರುವ ಎಲ್ಲ 2.68 ಕೋಟಿ ಗ್ರಾಮ ಪಂಚಾಯತಿಗಳಿಗೂ ಮಹಾತ್ಮಾ ಗಾಂಧಿ ಹೆಸರಿಡುವಂತೆ ಆಗ್ರಹಿಸಿದ್ದೆ.  ಅದೇ ರೀತಿ ವಿಬಿಜಿ ರಾಮ್ ಜಿ ಹೆಸರಿನ ಮುಂದೆ ಗಾಂಧಿ ಹೆಸರಿಟ್ಟು ಮಹಾತ್ಮಾ ಗಾಂಧಿವಿಬಿಜಿ ರಾಮ್ ಜಿ ಎಂದು ಮರು ನಾಮಕರಣ ಮಾಡುವಂತೆ ಒತ್ತಾಯಿಸಿದ್ದಾಗಿಯೂ ಈಶ್ವರ ಖಂಡ್ರೆ ತಿಳಿಸಿದರು.

ರಾಜ್ಯದಲ್ಲಿರುವ 5927 ಗ್ರಾಮಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳನ್ನೂ ಆದರ್ಶ ಗ್ರಾಮಗಳನ್ನಾಗಿ ಪರಿವರ್ತಿಸಿ ಎಂದು ಕರೆ ನೀಡಿದ ಸಚಿವರು, ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಭಾರತದ ಜೀವನಾಡಿ. ಆದರೆ ಇಂದು ಗ್ರಾಮೀಣ ಯುವಕರು ನಗರಗಳಿಗೆ ಹೋಗಿ ನೆಲೆಸುತ್ತಿದ್ದು, ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತನೆ ಆಗುತ್ತಿವೆ. ತಮ್ಮ ಗ್ರಾಮದಲ್ಲೇ ಯುವಜನರಿಗೆ ಉದ್ಯೋಗ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಿದರೆ, ಗ್ರಾಮಾಭಿವೃದ್ದಿಯೂ ಆಗುತ್ತದೆ. ವಲಸೆಯೂ ನಿಲ್ಲುತ್ತದೆ ಎಂದರು.
ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಪಿಡಿಒ, ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರು ಪ್ರಾಮಾಣಿಕತೆ, ನಿಷ್ಠೆ, ದಕ್ಷತೆ ಮತ್ತು ಬದ್ಧತೆಯಿಂದ ಸಂಘಟಿತರಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಪ್ರತಿ ಗ್ರಾಮವೂ ಅಭಿವೃದ್ಧಿಹೊಂದುತ್ತದೆ ಎಂದು  ಹೇಳಿದರು.

ಕೇಂದ್ರ ಪ್ರಾಯೋಜಿತ ಯೋಜನೆ ಇರಲಿ, ರಾಜ್ಯ ಸರ್ಕಾರ ಕೈಗೊಳ್ಳುವ ಯೋಜನೆಯೇ ಇರಲಿ ಎಲ್ಲ ಕಾಮಗಾರಿಗಳಲ್ಲಿ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಿ, ಗ್ರಾಮಗಳಲ್ಲಿ ನೀವು ಸೃಷ್ಟಿಸುವ ಆಸ್ತಿಗಳು ದೀರ್ಘಕಾಲ ಬಾಳಿಕೆ ಬರಬೇಕು. ಅದು ಶಾಶ್ವತವಾದ ದೇಶದ ಆಸ್ತಿಯಾಗಬೇಕು. ನಿಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುವ ಕಾಮಗಾರಿ ಗ್ರಾಮೀಣರ ಬದುಕನ್ನು ಹಸನು ಮಾಡಬೇಕು, ಅವರ ಜೀವನಮಟ್ಟ ಸುಧಾರಿಸಬೇಕು. ಗ್ರಾಮ ಅಭಿವೃದ್ಧಿ ಆಗಬೇಕು. ಹೀಗಾಗಿ ಪ್ರತಿಯೊಂದು ಗ್ರಾಮೀಣ ಆಸ್ತಿಯನ್ನೂ ಜಿಯೋ ಟ್ಯಾಗ್ ಮಾಡಿ ಎಂದು ಸೂಚಿಸಿದರು.

ರಾಜ್ಯದ ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಇಲಾಖೆಯಲ್ಲಿ ಹಲವು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 2026-27ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ 31 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್ – 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಂದ ಸ್ವೀಕೃತವಾಗಿದ್ದ 1,801 ವರ್ಗಾವಣೆ ಅರ್ಜಿಗಳನ್ನು ಪರಿಶೀಲಿಸಿ 1,229 ಅರ್ಹ ಸಿಬ್ಬಂದಿಗೆ ಆನ್ ಲೈನ್ ಮೂಲಕ ಕೌನ್ಸೆಲಿಂಗ್‌ ನಡೆಸಿ, ವರ್ಗಾವಣೆ ಆದೇಶಗಳನ್ನು ಸ್ಥಳದಲ್ಲೇ ನೀಡಲಾಗಿದೆ ಎಂದರು.

ಪಿಡಿಒಗಳ ಆನ್‌ಲೈನ್ ವರ್ಗಾವಣೆಗೆ ವಿಶೇಷ ಪ್ರಕರಣಗಳ ಅಡಿ 213, ಕಡ್ಡಾಯ ವರ್ಗಾವಣೆಯಡಿ 238 ಹಾಗೂ ಸಾಮಾನ್ಯ ಕೋರಿಕೆ ವರ್ಗಾವಣೆಯಡಿ 388 ಸೇರಿ ಒಟ್ಟು 839 ಅರ್ಜಿಗಳನ್ನು ಸ್ವೀಕರಿಸಿದ್ದು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕೌನ್ಸಿಲಿಂಗ್‌ಗೆ ಪರಿಗಣಿಸಲಾಗಿದೆ. ಕೆಲವು ತಾಲೂಕಿನಲ್ಲಿ ಹೆಚ್ಚು ಸಿಬ್ಬಂದಿ, ಮತ್ತೆ ಕೆಲವು ತಾಲೂಕಿನಲ್ಲಿ ಸಿಬ್ಬಂದಿ ಕೊರತೆ ಆಗದಂತೆ ಈ ಬಾರಿ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಖಾಲಿ ಹುದ್ದೆಗಳ, ಕೌನ್ಸಿಲಿಂಗ್‌ ಗೆ ಆಯ್ಕೆಯಾದರ ಆದ್ಯತಾ ಪಟ್ಟಿ, ಕಡ್ಡಾಯ ವರ್ಗಾವಣೆಗಳ ರಾಜ್ಯವಾರು ಅಂತಿಮ ಪಟ್ಟಿ ಹಾಗೂ ವರ್ಗಾವಣೆಯಿಂದ ವಿನಾಯತಿಗಾಗಿ ಕೋರಿಕೆ ಸಲ್ಲಿಸಿದವರ ಪಟ್ಟಿಯನ್ನು ವರ್ಗಾವಣೆ ಕೌನ್ಸಿಲಿಂಗ್ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಪಾರದರ್ಶಕತೆ ಕಾಪಾಡಲಾಗಿದೆ ಎಂದರು.

ಕೌನ್ಸಿಲಿಂಗ್‌ ಮೂಲಕ ನಡೆಯುತ್ತಿರುವ ಪಿಡಿಒಗಳ ವರ್ಗಾವಣೆಯಲ್ಲಿ ವಿಶೇಷ ಪ್ರಕರಣಗಳ – ವಿಶೇಷಚೇತನರು, ಗಂಭೀರ ಅನಾರೋಗ್ಯ ಹಾಗೂ ಪತಿ-ಪತ್ನಿ ಪ್ರಕರಣಗಳು- ಕೌನ್ಸಿಲಿಂಗ್ ಪ್ರಕ್ರಿಯೆಗೆ ಇಂದು ಚಾಲನೆ ನೀಡಿದ್ದು, ನಾಳೆ ಕಡ್ಡಾಯ ಮತ್ತು ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ. 16 ರಂದು ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ನಡೆಸಿ ವರ್ಗಾವಣೆ ಆದೇಶ ನೀಡಲಾಗುವುದು ಎಂದು ವಿವರ ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *