Menu

ಮಾಜಿ ಸಚಿವ ರಾಮಚಂದ್ರಗೌಡ ನಿಧನ: ಮುಖ್ಯಮಂತ್ರಿ ಸಂತಾಪ

ಬಿಜೆಪಿ ಮುಖಂಡ ವಿಧಾನಪರಿಷತ್ತಿನ ಮಾಜಿ ಸದಸ್ಯ, ಮಾಜಿ  ಸಚಿವ  ರಾಮಚಂದ್ರ ಗೌಡ  ಮಂಗಳವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ  ನಿಧನರಾದರು. ಅವರು ಆರು ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು, ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ  ಕೆಲಸ ಮಾಡಿದ್ದರು. ಆರೆಸ್ಸೆಸ್‌ ಹಿನ್ನೆಲೆಯಿದ್ದ ರಾಮಚಂದ್ರ ಗೌಡ ಅವರು ರಾಜ್ಯದಲ್ಲಿ ಯಡಿಯೂರಪ್ಪ ಜೊತೆಗೆ ಬಿಜೆಪಿ ಸಂಘಟನೆಯಲ್ಲಿ ಶ್ರಮಿಸಿದ್ದರು.

ರಾಮಚಂದ್ರಗೌಡ ಅವರ ನಿವಾಸಕ್ಕೆ ತೆರಳಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮಾಧ್ಯಮದವರೊಂದಿಗೆ ಮಾತನಾಡಿದರು.  ರಾಮಚಂದ್ರ ಗೌಡರು ನಿಷ್ಠಾವಂತ ಪ್ರಾಮಾಣಿಕ ರಾಜಕಾರಣಿ. ನನಗೆ ಹತ್ತಿರದ ಸಂಬಂಧಿಯಾಗಿದ್ದು, ಕಾರ್ಪೊರೇಟರ್ ಆಗಿ ಜನರ ನಡುವೆ ಬೆರತು ಅವರ ಕಷ್ಟಸುಖಗಳನ್ನು ಅರಿತು ಜನರ ಸೇವೆಯಲ್ಲಿ ತೊಡಗಿದ್ದವರು. ಬೆಂಗಳೂರು ನಗರದ ಎಲ್ಲ ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ವಿಧಾನಪರಿಷತ್ತಿನ ಸದಸ್ಯರಾಗಿ ಹಾಗೂ ಸರ್ಕಾರದ ಸಚಿವರಾಗಿ ಜನಸೇವೆ ಸಲ್ಲಿಸಿ ಅಪಾರ ಜನಸಮೂಹದ ಅಭಿಮಾನವನ್ನು ಹೊಂದಿದ್ದರು ಎಂದು ಹೇಳಿದರು.

1985 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಸಾರ್ವಜನಿಕ ಬಸ್ಸುಗಳಲ್ಲಿ ಆಗಮಿಸಿ ಪ್ರಚಾರ ಕಾರ್ಯಗಳನ್ನು ಕೈಗೊಂಡಿದ್ದ ಸರಳ ವ್ಯಕ್ತಿತ್ವ ಅವರದ್ದಾಗಿತ್ತು. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ರಾಮಚಂದ್ರ ಗೌಡರು, ಸಮಾಜದ ಹಿತಕ್ಕಾಗಿ ತಮ್ಮ ಅಭಿಪ್ರಾಯವನ್ನು ನೇರ ಹಾಗೂ ನಿಷ್ಠುರವಾಗಿ ತಿಳಿಸುತ್ತಿದ್ದರು. ತಮ್ಮದೇ ಆದ ನೀತಿ ಸಿದ್ಧಾಂತಗಳೊಂದಿಗೆ ರಾಜಕಾರಣ ಮಾಡಿದರಲ್ಲದೇ, ರಾಜಕೀಯ ವಲಯದಲ್ಲಿ ಯಾರೊಬ್ಬರ ಬಗ್ಗೆಯೂ ದ್ವೇಷವಿರಿಸಿಕೊಳ್ಳದ ಅಜಾತಶತ್ರುವೆನಿಸಿದ್ದರು ಎಂದರು.

ಬಿಜೆಪಿಯ ಯಡಿಯೂರಪ್ಪನವರು ತಮ್ಮೆಲ್ಲಾ ಪಕ್ಷದ ತೀರ್ಮಾನಗಳಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು.‘ನನ್ನೊಂದಿಗೂ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದರು. ತಮ್ಮ ಆರೋಗ್ಯ ಸಮಸ್ಯೆಯ ಹೊರತಾಗಿಯೂ, ನನ್ನ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಇಚ್ಛಿಸಿದ್ದರು. ಎರಡು ದಿನಗಳ ಹಿಂದೆ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ, ದುರಾದೃಷ್ಟವಶಾತ್ ಅವರು ವಿಧಿವಶರಾಗಿದ್ದು ದು:ಖದ ವಿಷಯ ಎಂದು ಸಿಎಂ ಸ್ಮರಿಸಿದರು.

ವಿಧಾನಪರಿಷತ್ತಿನಲ್ಲಿ ಅವರು ನೀಡಿದ ಭಾಷಣಗಳು ನಮ್ಮ ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತವೆ. ಸರಳ ಸಜ್ಜನಿಕೆಯ ರಾಜಕಾರಣಿ ಇಂದು ನಮ್ಮೊಡನಿಲ್ಲ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದು:ಖದಲ್ಲಿ ನಾವೂ ಕೂಡ ಭಾಗಿಯಾಗಿದ್ದು, ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

Related Posts

Leave a Reply

Your email address will not be published. Required fields are marked *