Menu

ಪಂಕ್ಚರ್‌ ಆಗಿ ನಿಂತಿದ್ದ ಟ್ಯಾಂಕರ್‌ಗೆ ಲಾರಿ ಡಿಕ್ಕಿ: ಚಾಲಕ ಸಜೀವ ದಹನ

ಪಂಕ್ಚರ್‌ ಆಗಿ ನಿಂತಿದ್ದ ಟ್ಯಾಂಕರ್‌ಗೆ  ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ತಕ್ಷಣ ಹೊತ್ತಿ ಉರಿದಿದ್ದು, ಚಾಲಕ ಸಜೀವ ದಹನವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಗಡಿಭಾಗ ಆಂಧ್ರದ ಅನಂತಪುರ ಜಿಲ್ಲೆಯ ಡಿ. ಹಿರೇಹಾಳ ಬಳಿ ನಡೆದಿದೆ.

ಪಂಕ್ಚರ್ ಆಗಿದ್ದ ಸಿಮೆಂಟ್ ಟ್ಯಾಂಕರ್‌ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು, ಈ ವೇಳೆ ರಾಂಪುರಂ ಕಡೆಯಿಂದ ಬಂದ ಮತ್ತೊಂದು ಲಾರಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದ ಚಾಲಕ ದೀಕ್ಷಿತ್ (28) ಹೊರಬರಲು ಸಾಧ್ಯವಾಗದೆ ಸಜೀವ ದಹನವಾಗಿದ್ದಾರೆ. ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ದಾವಣಗೆರೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ಮಹಿಳೆಯನ್ನು ಹೊಲವೊಂದಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಪತಿ ಕುಡಿದು ಬಂದಿದ್ದರಿಂದ ಜಗಳವಾಡಿ ರಾತ್ರಿಯೇ ಮಹಿಳೆ ಅಣ್ಣನ ಮನೆಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.

ಮಹಿಳೆಯ ಪತಿ ಕುಡಿದು ಬಂದಿದ್ದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಮಹಿಳೆ ಅಣ್ಣನ ಮನೆಗೆ ಹೋಗಲು ಮನೆಯಿಂದ ಹೊರನಡೆದಿದ್ದಾರೆ. ರಾತ್ರಿ ಗ್ರಾಮದ ಚಿಕನ್ ಅಂಗಡಿ ಸಮೀಪ ಕುಳಿತು ಅಳುತ್ತಿದ್ದ ಮಹಿಳೆಯನ್ನು ಗಮನಿಸಿದ ಯುವಕ ಮಾತನಾಡಿಸಿ ಸಮಾಧಾನಪಡಿಸುವ ನೆಪದಲ್ಲಿ ಕುಡಿಯಲು ಪಾನೀಯ ನೀಡಿದ್ದಾನೆ. ಪಾನೀಯ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮಹಿಳೆಗೆ ತಲೆ ಸುತ್ತಿ ಮತ್ತು ಬಂದಂತಾಗಿದೆ, ಬಳಿಕ ಏನಾಯಿತು ಎಂಬುದು ನೆನಪಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಾಮುಕರು ಬೈಕ್‌ನಲ್ಲಿ ಮಹಿಳೆಯನ್ನು ಕೂರಿಸಿಕೊಂಡು ಜಮೀನೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಮುಂಜಾನೆ ಮಹಿಳೆಗೆ ಎಚ್ಚರವಾಗಿದೆ. ಅಲ್ಲಿಂದ ಅಣ್ಣನ ಮನೆಗೆ ತಲುಪಿದ್ದಾಳೆ. ಜೂನ್ 8ರಂದು ಮಹಿಳೆಯ ಅಣ್ಣನ ಮಗ ಕರೆ ಮಾಡಿ, ಆಕೆಯ ಬೆತ್ತಲೆ ಫೋಟೋ ಹಾಗೂ ವೀಡಿಯೊ ಮೊಬೈಲ್‌ಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಆಘಾತಗೊಂಡ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *