Menu

ಅಡ್ಡ ಮತದಾನ: ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ಶಾಸಕ ಸುರೇಶ್‌ 

ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಾಳಯದಲ್ಲಿ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ  ನಡೆದಿರುವ ಆರೋಪದ ಸುತ್ತ ರಾಜಕೀಯ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಹಾಸನ ಜಿಲ್ಲೆಯ ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಹುಲ್ಲಹಳ್ಳಿ ಕೆ. ಸುರೇಶ್  ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಿ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.

ಧರ್ಮಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುರೇಶ್ ಮೊದಲು ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತಮ್ಮ ವಿರುದ್ಧ ಅಪಪ್ರಚಾರ ನಡೆಸಿದವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕಾಣಿಕೆ ಸಮರ್ಪಣೆ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ನಾನು ಪಕ್ಷದ್ರೋಹ ಮಾಡಿಲ್ಲ. ಬಿಜೆಪಿಯ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತನಾಗಿ ಪಕ್ಷದ ವರಿಷ್ಠರು ಸೂಚಿಸಿದ ಅಭ್ಯರ್ಥಿಗೆಲೇ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇನೆ. ಅಡ್ಡ ಮತದಾನದ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಈ ವಿಚಾರದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡುತ್ತೇನೆ ಎಂದು ಹೇಳಿದರು.

ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಮಂಜುನಾಥ ಸ್ವಾಮಿ ಹಾಗೂ ನನ್ನ ಕ್ಷೇತ್ರದ ಜನರೇ ಸಾಕ್ಷಿ. ಬಿಜೆಪಿ ನನಗೆ ತಾಯಿಯ ಸಮಾನ. ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ದೇವಸ್ಥಾನಕ್ಕೆ ತೆರಳುವ ಮೊದಲು ಅಣ್ಣಪ್ಪ ಬೆಟ್ಟಕ್ಕೆ ಭೇಟಿ ನೀಡಿದ ಶಾಸಕ ಸುರೇಶ್, ವಿಶೇಷ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆದರು. ನಾನು ಯಾವುದೇ ಮೋಸ ಮಾಡಿಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿದರು.

ದೇವರ ದರ್ಶನದ ಬಳಿಕ ಶಾಸಕ ಸುರೇಶ್ ಅವರು ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Related Posts

Leave a Reply

Your email address will not be published. Required fields are marked *