ಪ್ರಪಂಚದ ಅತಿ ದೊಡ್ಡ ಮಾನವ ಸಂಪನ್ಮೂಲ ಕಣಜವಾಗಿರುವ ಭಾರತದ ಯುವಪಡೆಯ ಕೌಶಲ್ಯ ಮತ್ತು ಪರಿಶ್ರಮ ಈ ನೆಲದಲ್ಲಿ ಭದ್ರ ನೆಲೆಕಂಡು ಕೊಂಡಾಗಲೇ ದೇಶದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ದೊರೆತಂತಾಗುತ್ತೆ.
ಬ್ರಿಟಿಷರ ಕಬಂಧ ಹಸ್ತದಿಂದ ಮುಕ್ತಗೊಂಡ ಎಪ್ಪತ್ತಾರು ವರ್ಷಗಳ ಇಳಿವಯಸಿನ ಸ್ವತಂತ್ರ ಭಾರತದ ದಿಕ್ಕು- ದಿಶೆ ಬದಲಾಗುತ್ತಿದೆಯೇ ..? ಸ್ವತಂತ್ರ ಭಾರತದ ಪರಮಾಶಯಗಳಿಗೆ ಅನುಗುಣವಾಗಿ ಭಾರತದ ಇಂದಿನ ಪೀಳಿಗೆಯ ಶಿಕ್ಷಣ ಮತ್ತು ಬದುಕು ರೂಪುಗೊಂಡಿದೆಯೇ?
ನಾವಿಂದು ಮತ್ತೆ ದೇಶದ ಸಂಪೂರ್ಣ ದೇಶಿಯತೆ ಮತ್ತು ಸಮಗ್ರತೆಗಾಗಿ ಗಟ್ಟಿ ಹೋರಾಟಕ್ಕೆ ಟೊಂಕ ಕಟ್ಟುವಂತಾಗಿದೆ. ಜಾತೀಯತೆ, ಜಾಗತೀಕರಣ ಮತ್ತು ಕಲುಷಿತ ರಾಜಕಾರಣದ ಪರಿಣಾಮವಾಗಿ ಸ್ವತಂತ್ರ ಭಾರತದ ಮೂಲ ಉದ್ದೇಶಗಳು ಮಸುಕಾಗಿರುವುದು ನಿಜ. ಒಂದೆಡೆ ದೇಶೀಯತೆಯನ್ನು ನಿತ್ಯವೂ ಸ್ತುತಿ ಮಾಡುವ ಸರ್ಕಾರಗಳು, ಜಾಗತಿಕ ಪ್ರಪಂಚಕ್ಕೆ ಮುಕ್ತ ಬಾಗಿಲು ತೆರೆಯುತ್ತಿರುವುದು ಸೋಜಿಗ ಮತ್ತು ಅರ್ಥವಾಗದ ನೀತಿ ! ದೇಶದ ಆರ್ಥಿಕತೆಯ ಅಭಿವೃದ್ದಿಯ ನೆಪದಲ್ಲಿ ರಾಷ್ಟ್ರೀಯತೆಯ ಮೂಲ ತತ್ವಗಳಿಗೆ ಸರ್ಕಾರ ತಿಲಾಂಜಲಿ ನೀಡಿರುವುದು ಗಂಭೀರ. ಆರ್ಥಿಕ ಅಭಿವೃದ್ದಿಯ ಜೊತೆ ಜೊತೆಗೆ ಭಾರತೀಯತೆಯನ್ನು ಮೈಗೂಡಿಸಿಕೊಂಡು ದೇಶದ ಬೆಳವಣಿಗೆಯತ್ತ ಗಮನಹರಿಸುವ ಯೋಜನೆಗಳಿಂದು ನೇಪಥ್ಯಕ್ಕೆ ಸರಿದಿರುವುದೂ ಕಳವಳಕಾರಿ.
ಜಾಗತೀಕರಣದ ಉದ್ಯಮಗಳಿಗೆ ಕುಮ್ಮಕ್ಕು ನೀಡುವ ಸರ್ಕಾರ ಖಾಸಗಿ ಉದ್ಯಮ ವಲಯವನ್ನು ಇನ್ನಿಲ್ಲದಂತೆ ಪ್ರೋತ್ಸಾಹಿಸುತ್ತಿರುವುದು ದುರಂತಮಯ . ಖಾಸಗಿ ಉದ್ದಿಮೆ ಎಂದಿಗಾದರೂ ಸಾರ್ವತ್ರಿಕ ಉದ್ದಿಮೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹದು. ಕಳೆದ ಐವತ್ತು- ಅರವತ್ತು ವರ್ಷಗಳ ಸಾರ್ವತ್ರೀಕರಣದ ಕಹಿ ಅನುಭವಗಳ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವತ್ರಿಕ ಸಾಮ್ಯಗಳ ಮೇಲಿನ ಸರ್ಕಾರದ ಬಂಡವಾಳ ಹಿಂತೆಗೆತ ಮತ್ತು ಖಾಸಗಿ ಬಂಡವಾಳ ಹೂಡಿಕೆಗೆ ಮುಂದಾಗಿರುವುದು ಕಂಡಾಗ, ಭಾರತ ಮತ್ತೆ ವಸಾಹತುಶಾಹಿ ಮತ್ತು ಬಂಡವಾಳಶಾಹಿ ವ್ಯಕ್ತಿಗಳಿಗೇ ತನ್ನ ಮೊದಲ ಆದ್ಯತೆ ಕೊಡುವುದೆಂಬುದು ಖಾತರಿಯಾಗುವ ಸಂಗತಿ.
ಎಲ್ಲಿ ಖಾಸಗಿ ವಲಯದ ಪಾರುಪತ್ಯ ಮೇಲುಗೈ ಸಾಧಿಸುವುದೋ, ಅಲ್ಲಿ ಸಾರ್ವತ್ರಿಕ ಚಿಂತನೆ ಮತ್ತು ಸಾರ್ವತ್ರಿಕ ಹಿತಾಸಕ್ತಿಯೂ ಕಡಿಮೆ ಇರುವುದನ್ನು ಗಮನಿಸುವಂತಹದು. ಹೀಗಿರುವಾಗ ಸರ್ಕಾರಗಳು ಯುವ ಪೀಳಿಗೆಗೆ ಸಾಮೂಹಿಕವಾಗಿ ರಾಷ್ಟ್ರ ಮಟ್ಟದಲ್ಲಿ ವ್ಯಾಪP ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲಾಗದು. ಭಾರತದಂತಹ ಅತಿ ದೊಡ್ಡ ಯುವ ಮಾನವಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಲು ದೇಶದಲ್ಲಿ ಪರಿಪೂರ್ಣ ಶಕ್ತಿ, ಸಾಮರ್ಥ್ಯವಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ರೂಪುಗೊಂಡ ಜೊತೆ ಜೊತೆಯಲ್ಲಿ ರಾಷ್ಟ್ರೀಯ ಉದ್ಯೋಗ ನೀತಿ ಕೂಡಾ ಪರಿಣಾಮಕಾರಿಯಾಗಿ ಆಯೋಜನೆಗೊಳ್ಳಬೇಕಿತ್ತು. ಪ್ರತಿ ವರ್ಷ ದೇಶದ ನೂರಾರು ವಿವಿಗಳಿಂದ ಹೊರ ಬರುವ ಲಕ್ಷಾಂತರ ಪದವಿಧರರಿಗೆ ಸುಪ್ತ ಉದ್ಯೋಗ ಅವಕಾಶ ಕಲ್ಪಿಸಲು ಖಚಿತ ಮತ್ತು ನಿಖರ ಯೋಜನೆಗಳು ನಮ್ಮ ಬಳಿ ಇಲ್ಲ.
ಭಾರತದಲ್ಲಿ ಪದವಿ ಪಡೆದ ಪ್ರತಿಯೋರ್ವ ಬಿ.ಟೆಕ್, ಎಂಬಿಎ ಮತ್ತು ಎಂಬಿಬಿಎಸ್ ಯುವಪಡೆ ಇಂದು ಅಮೆರಿಕ ಮತ್ತು ಯೂರೋಪ್ ದೇಶಗಳತ್ತ ಮುಖ ಮಾಡಿರುವುದನ್ನು ತಪ್ಪಿಸಲು ಸರ್ಕಾರಗಳಿಗೆ ಯಾಕೆ ಸಾಧ್ಯವಾಗಿಲ್ಲ ? ಇದು ಭಾರತದ ಸ್ವಾವಲಂಬನೆ ಮತ್ತು ಸ್ವತಂತ್ರ ಬೆಳವಣಿಗೆಗೆ ಒಂದು ಸವಾಲು. ಪ್ರಪಂಚದ ಅತಿ ಮಾನವ ಸಂಪನ್ಮೂಲ ಕಣಜವಾಗಿರುವ ಭಾರತದ ಯುವಪಡೆಯ ಕೌಶಲ್ಯ ಮತ್ತು ಪರಿಶ್ರಮ ಈ ನೆಲದಲ್ಲಿಯೇ ನೆಲೆಕಂಡು ಕೊಂಡ ದಿನವೇ ಈ ದೇಶದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ದೊರೆತಂತಾಗುತ್ತೆ.


