ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ದೇಣಿಗೆಗೆ ಸಂಬಂಧಿಸಿದಂತೆ ಕೇಳಿ ಬಂದಿರುವ ಅಕ್ರಮಗಳ ಆರೋಪ ಈಗ ಸುಪ್ರೀಂಕೋರ್ಟ್‌ಗೆ ತಲುಪಿದೆ. ದೇವಸ್ಥಾನದ ವಿಚಾರದಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿದೆ.
ಪ್ರಕರಣ ಸಂಬಂಧ ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಉನ್ನತ ಮಟ್ಟದ ವಿಶೇಷ ತನಿಖಾ ತಂಡ ರಚಿಸಿ ತ್ವರಿತ ಕ್ರಮ ಕೈಗೊಂಡಿದೆ. ವಕೀಲ ಅನೂಪ್ ಅವಸ್ಥಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅಯೋಧ್ಯೆ ಮಂದಿರದ ದೇಣಿಗೆಗೆ ಸಂಬಂಧಿಸಿದ ಆರೋಪಗಳನ್ನು ನ್ಯಾಯಾಲಯವೇ ನೇರವಾಗಿ ಪರಿಶೀಲಿಸಬೇಕು ಮತ್ತು ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಮನವಿ ಮಾಡಿದ್ದಾರೆ.
ಸಿಜೆಐ ಸೂರ್ಯ ಕಾಂತ್ ಅವರು, ನ್ಯಾಯಾಲಯದಲ್ಲಿ ಇಂತಹ ವಿಷಯಗಳ ಬಗ್ಗೆ ಕೇವಲ ಮೌಖಿಕವಾಗಿ ಹೇಳುವ ಬದಲು ಅಧಿಕೃತವಾಗಿ ಲಿಖಿತ ಟಿಪ್ಪಣಿಗಳನ್ನು ಸಲ್ಲಿಸಭೇಕು, ಟಿಪ್ಪಣಿಗಳನ್ನು ಪರಿಶೀಲಿಸಿದ ನಂತರ ಯಾವುದು ಪ್ರಸ್ತುತ ಎಂಬುದನ್ನು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ಅರ್ಪಿಸುತ್ತಿದ್ದ ಕಾಣಿಕೆಯನ್ನು ಲೆಕ್ಕ ಮಾಡುತ್ತಿದ್ದ ಸಿಬ್ಬಂದಿ ತಿಂಗಳಿಗೆ ೧೮,೦೦೦ ರೂಪಾಯಿಯಿಂದ ೨೦,೦೦೦ ರೂಪಾಯಿ ಸಂಬಳ ಪಡೆಯುತ್ತಿದ್ದರೂ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗ ಖರೀದಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಕಾಣಿಕೆ ಎಣಿಕೆ ಮಾಡುತ್ತಿದ್ದ ಲವಕುಶ್ ಮಿಶ್ರಾ ಮತ್ತು ಇತರ ನೌಕರರು ತಮ್ಮ ಅಲ್ಪ ಆದಾಯದ ಹೊರತಾಗಿಯೂ ಅಯೋಧ್ಯೆಯಲ್ಲಿ ೪೦ ಲಕ್ಷದಿಂದ ೧.೫ ಕೋಟಿ ರೂ.ವರೆಗಿನ ಮೌಲ್ಯದ ಆಸ್ತಿ ಹಾಗೂ ಜಾಗಗಳನ್ನು ಖರೀದಿಸಿರುವುದು ಪತ್ತೆಯಾಗಿದೆ.
ಆರೋಪಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಗೋವಿನ ಸಗಣಿಯ ರಾಶಿಯೊಳಗೆ ಬಚ್ಚಿಟ್ಟಿದ್ದ ೧೦ ಲಕ್ಷದಿಂದ ೧೨ ಲಕ್ಷದಷ್ಟು ಅಕ್ರಮ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


