ಅಂಗವೈಕಲ್ಯದ ಜೊತೆ ಬುದ್ಧಿ ಮಾಂದ್ಯತೆ ಹೊಂದಿರುವ ಹೊಂದಿರುವ ಇಪ್ಪತ್ತಮೂರು ವರ್ಷದ ಯುವತಿಯ ಗರ್ಭಾಶಯವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಇದಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಯುವತಿ ದಿನನಿತ್ಯದ ಮೂಲಭೂತ ಚಟುವಟಿಕೆಗಳ ಬಗ್ಗೆ ಅರಿವು ಹೊಂದಿಲ್ಲದಿರುವುದು, ದಿನಚರಿ ನಿರ್ವಹಿಸುವುದು ಹಾಗೂ ಸ್ವತಂತ್ರವಾಗಿ ಬದುಕುವುದು ಸಾಧ್ಯವಾಗದ ಸ್ಥಿತಿಯಲ್ಲಿರುವುದನ್ನು ಗಮನಿಸಿ ಕೋರ್ಟ್ ಈ ತೀರ್ಪು ನೀಡಿದೆ.
ಯುವತಿಯ ಮಾಸಿಕ ಋತುಚಕ್ರ ಅನಿಯಮಿತವಾಗಿದ್ದು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗದೆ ಪದೇಪದೆ ಸೋಂಕುಗಳು, ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಮಗಳ ಏಕೈಕ ಆರೈಕೆದಾರರಾಗಿರುವ ತನಗೆ ವಯಸ್ಸಾಗುತ್ತಿದೆ. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಒತ್ತಡ ಹೆಚ್ಚಾಗಿದೆ ಎಂದು ಉಲ್ಲೇಖಿಸಿ ಪೋಷಕರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಯುವತಿ ಗ್ಲೋಬಲ್ ಡೆವಲಪ್ಮೆಂಟ್ ಡಿಲೆ ಮತ್ತು ಮೊಡರೇಟ್ ಪರ್ಮನೆಂಟ್ ಇಂಟಲೆಕ್ಚುವಲ್ ಆ್ಯಂಡ್ ಡೆವಲಪ್ಮೆಂಟಲ್ ಡಿಸಾಬಿಲಿಟಿ ಸಮಸ್ಯೆಯಿಂದ ಬಳಲುತ್ತಿದ್ದು, ಸಾಮಾಜಿಕ ವಯಸ್ಸು ವರ್ಷ 4 ತಿಂಗಳ ಮಗುವಿನ ಮಟ್ಟದಲ್ಲಿದೆ. ಐಕ್ಯೂ 36 ಆಗಿದ್ದು, ಶೇ.75ರಷ್ಟು ಶಾಶ್ವತ ಅಂಗವೈಕಲ್ಯವಿದೆ. ಅಪಸ್ಮಾರ ಸಮಸ್ಯೆ ಬಾಧಿಸುತ್ತಿದೆ ಎಂದು ವೈದ್ಯಕೀಯ ಮಂಡಳಿ ವರದಿ ನೀಡಿತ್ತು.
ಮನವಿ ಪರಿಶೀಲಿಸಿ, ವೈದ್ಯಕೀಯ ವರದಿಯನ್ನು ಗಮನಿಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಆದೇಶ ನೀಡಿದ್ದು, ಆರೋಗ್ಯ, ಸ್ವಚ್ಛತೆ, ಘನತೆ, ಸುರಕ್ಷತೆ ಮತ್ತು ಜೀವನದ ಗುಣಮಟ್ಟ ಸುಧಾರಿಸುವ ಉದ್ದೇಶದಿಂದಲೇ ಈ ಶಸ್ತ್ರಚಿಕಿತ್ಸೆ ಶಿಫಾರಸು ಮಾಡಲಾಗಿದೆ. ಯುವತಿಯ ಆರೋಗ್ಯ ಮತ್ತು ಕಲ್ಯಾಣದ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾದ ನಿರ್ಧಾರ ಎಂದು ತಿಳಿಸಿದ್ದಾರೆ.


