Friday, September 04, 2026
Menu

ನೇಪಾಳ ಪ್ರವಾಹ: 9 ದಿನದ ಬಳಿಕ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಲ್ಲಿ ಇಬ್ಬರ ರಕ್ಷಣೆ

ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ 9 ದಿನದ ಬಳಿಕ ತ್ರಿಶೂಲಿ 3A ಜಲ ವಿದ್ಯುತ್‌ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ. ಈ ಬೆಳವಣಿಗೆ ಸುರಂಗದೊಳಗೆ ಇನ್ನೂ ಕೆಲವರು ಜೀವಂತ ಇರುವ ಸಾಧ್ಯತೆ ಬಗ್ಗೆ ರಕ್ಷಣಾ ಸಿಬ್ಬಂದಿಯಲ್ಲಿ ಭರವಸೆ ಮೂಡಿದೆ.

ಮೆಕ್ಯಾನಿಕಲ್ ಫೋರ್‌ಮನ್ ಮತ್ತು ಮೆಕ್ಯಾನಿಕಲ್ ಸೂಪರ್‌ವೈಸರ್ ಸುರಕ್ಷಿತವಾಗಿ ಸುರಂಗದಿಂದ ಹೊರ ಬಂದ ಕಾರ್ಮಿಕರು. ಪ್ರವಾಹದ ಬಳಿಕ ಸುರಂಗ ಅವಶೇಷಗಳಿಂದ ಮುಚ್ಚಿ ಹೋಗಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಸುರಕ್ಷಿತವಾಗಿ ಹೊರಗೆ ಕರೆ ತಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಕಾರ್ಮಿಕನನ್ನು ಮಣ್ಣಿನಿಂದ ಆವೃತವಾಗಿರುವ ಸ್ಥಿತಿಯಲ್ಲಿ ರಕ್ಷಣಾ ಸಿಬ್ಬಂದಿಯೊಬ್ಬರು ಹೆಗಲ ಮೇಲೆ ಹೊತ್ತು ಹೊರಗೆ ಕರೆತರುತ್ತಿರುವ ದೃಶ್ಯಗಳನ್ನು ಸ್ಥಳೀಯ ದೂರದರ್ಶನ ವಾಹಿನಿಗಳು ಪ್ರಸಾರ ಮಾಡಿವೆ.

ತ್ರಿಶೂಲಿ ನದಿಯ ತೀರದಲ್ಲಿರುವ ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯಿಂದ ಕನಿಷ್ಠ 557 ಕಾರ್ಮಿಕರು ನಾಪತ್ತೆಯಾಗಿದ್ದಾರೆ. 115 ಮಂದಿ ಮುಖ್ಯ ಸುರಂಗದೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ನೇಪಾಳದ ಸ್ವತಂತ್ರ ವಿದ್ಯುತ್ ಉತ್ಪಾದಕರ ಸಂಘ ತಿಳಿಸಿದೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿರುವ ಅಧಿಕಾರಿಗಳು, ಸುರಂಗದೊಳಗೆ ಇನ್ನೂ ಕೆಲವರು ಜೀವಂತವಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ.

ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಪ್ರವಾಹದಲ್ಲಿ ಕನಿಷ್ಠವೆಂದರೂ ೧೨೫೯ ಮಂದಿ ಪ್ರಾಣ ಕಳೆದುಕೊಂಡಿದ್ದು, ೫ ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ.

12 ಜಲವಿದ್ಯುತ್ ಯೋಜನೆಗಳ 900 ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಅವರಲ್ಲಿ 500 ಮಂದಿ ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಸಂತ್ರಸ್ತರನ್ನು ಗುರುತಿಸಲು ಭಾರತ  ಮಾನವೀಯ ನೆರವು ನೀಡಲು ಮುಂದಾಗಿದೆ.  ನಾಪತ್ತೆಯಾಗಿರುವ ವ್ಯಕ್ತಿಗಳ ಭಾರತದಲ್ಲಿರುವ ಜೈವಿಕ ಸಂಬಂಧಿಕರಾದ ತಂದೆ-ತಾಯಿ, ಮಕ್ಕಳು ಹಾಗೂ ಸಹೋದರ-ಸಹೋದರಿಯರ ಜೈವಿಕ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪ್ರೊಫೈಲಿಂಗ್ ಸೌಲಭ್ಯವನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಗಳು , ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಗಳು, ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯದ ಪ್ರಯೋಗಾಲಯಗಳು ಹಾಗೂ ಡಿಎನ್‌ಎ ಪ್ರೊಫೈಲಿಂಗ್ ಸಾಮರ್ಥ್ಯ ಹೊಂದಿರುವ ಎನ್‌ಎಬಿಎಲ್‌ ಮಾನ್ಯತೆ ಪಡೆದ ಇತರ ಪ್ರಯೋಗಾಲಯಗಳಲ್ಲಿ ಈ ಪರೀಕ್ಷೆ ನಡೆಸಬಹುದು.
ನೇಪಾಳ ಪೊಲೀಸರ ಸಲಹೆಯಂತೆ, ತಾಂತ್ರಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಆಟೋಸೋಮಲ್ ಎಸ್‌ಟಿಆರ್ (Autosomal STR) ವಿಧಾನದಲ್ಲಿ ಡಿಎನ್‌ಎ ಪ್ರೊಫೈಲಿಂಗ್ ನಡೆಸಬೇಕು ಎಂದು ಸಚಿವಾಲಯ ತಿಳಿಸಿದೆ.

Related Posts

Leave a Reply

Your email address will not be published. Required fields are marked *