Menu

ವಿಧಾನಮಂಡಲ ಅಧಿವೇಶನದಿಂದ ಅರ್ಧಕ್ಕೆ ಹೊರಟ ರಾಜ್ಯಪಾಲ ರವಿ!

ಚೆನ್ನೈ: ರಾಜ್ಯ ಸರಕಾರದ ಜೊತೆ ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದ ಸೃಷ್ಟಿಸಿಕೊಳ್ಳುತ್ತಲೇ ಬಂದಿರುವ ತಮಿಳುನಾಡು ರಾಜ್ಯಪಾಲ ರವಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡದೇ ಅರ್ಧಕ್ಕೆ ಎದ್ದು ಹೋದ ಘಟನೆ ಪುನರಾವರ್ತಿಸಿದೆ.

ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸದ ಕಾರಣ ಶಿಷ್ಟಾಚಾರದ ಉಲ್ಲಂಘನೆಯನ್ನು ಉಲ್ಲೇಖಿಸಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಸೋಮವಾರ ಬೆಳಿಗ್ಗೆ ರಾಜ್ಯ ವಿಧಾನಸಭೆಯಿಂದ ಹಠಾತ್ತನೆ ಹೊರನಡೆದರು.

ಈ ಘಟನೆಯು ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಬಿರುಕನ್ನು ಆಳಗೊಳಿಸಿದೆ, ಸಾಂವಿಧಾನಿಕ ಔಚಿತ್ಯ ಮತ್ತು ರಾಜಕೀಯ ಏಕಪಕ್ಷೀಯತೆಯ ಬಗ್ಗೆ ಚರ್ಚೆಗಳನ್ನು ಪುನರುಜ್ಜೀವನಗೊಳಿಸಿದೆ.

ಬೆಳಗ್ಗೆ 9.29ಕ್ಕೆ ರಾಜ್ಯಪಾಲ ರವಿ ಅಧಿವೇಶನಕ್ಕೆ ಆಗಮಿಸಿದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜೊತೆಗಿದ್ದರು. ಸದನ ಆರಂಭವಾಗುತ್ತಿದ್ದಂತೆ ತಮಿಳರ ನಾಡಗೀತೆ ತಮಿಳು ತಾಯಿ ವಾಳು ಹಾಡಲಾಯಿತು. ಆದರೆ, ರಾಜ್ಯಗೀತೆಯ ಬಳಿಕ ರಾಷ್ಟ್ರಗೀತೆ ಹಾಡಲಿಲ್ಲ. ಇದರಿಂದ ಅಸಮಾಧಾನಗೊಂಡ ರಾಜ್ಯಪಾಲರು, ಔಪಚಾರಿಕ ಭಾಷಣ ಮಾಡದೇ ಸದನದಿಂದ ಹೊರನಡೆದರು.

ಸ್ಪೀಕರ್ ಎಂ.ಅಪ್ಪವು ಪ್ರತಿಕ್ರಿಯಿಸಿ, ರಾಜ್ಯಪಾಲರು ಸದನದಲ್ಲಿ ಹೇಳಿರುವ ಯಾವುದೇ ಮಾತು ಕಡತದಲ್ಲಿ ದಾಖಲಾಗುವುದಿಲ್ಲ ಎಂದು ಘೋಷಿಸಿದರು. ತನ್ನ ಸಾಧನೆ ಮತ್ತು ಹೊಸ ವರ್ಷದ ನೀತಿಗಳ ಕುರಿತು ರಾಜ್ಯ ಸರ್ಕಾರ ಭಾಷಣ ಸಿದ್ಧಪಡಿಸಿತ್ತು.

ರಾಜ್ಯಪಾಲರು ಸದನ ತೊರೆಯುತ್ತಿದ್ದಂತೆ ಎಐಎಡಿಎಂಕೆ ಶಾಸಕರು ಪ್ರತಿಭಟಿಸಿ, ಕಲಾಪಕ್ಕೆ ಅಡ್ಡಿಪಡಿಸಿದರು. ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ಸ್ಪೀಕರ್ ತಿಳಿಸಿದರೂ ಕಲಾಪಕ್ಕೆ ಅಡ್ಡಿ ಮುಂದುವರೆಸಿದರು. ನಂತರ ಪ್ರತಿಭಟನಾನಿರತ ಶಾಸಕರನ್ನು ಸದನದಿಂದ ಹೊರ ಕಳುಹಿಸಲಾಯಿತು.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ತಮಿಳುನಾಡು ರಾಜಭವನ, “ತಮಿಳುನಾಡು ಸದನದಲ್ಲಿ ಕೇವಲ ರಾಜ್ಯಗೀತೆಯನ್ನು ಹಾಡಲಾಗಿದ್ದು, ರಾಷ್ಟ್ರಗೀತೆ ಹಾಡಲಿಲ್ಲ. ಇದನ್ನು ಗಮನಿಸಿದ ರಾಜ್ಯಪಾಲರು ರಾಷ್ಟ್ರಗೀತೆ ಹಾಡುವಂತೆ ಸಿಎಂ ಮತ್ತು ಸ್ಪೀಕರ್ಗೆ ತಿಳಿಸಿದರು. ಸದನದ ಆರಂಭ ಮತ್ತು ಮುಕ್ತಾಯದಲ್ಲಿ ರಾಷ್ಟ್ರಗೀತೆ ಹಾಡುವ ಕುರಿತು ಅವರು ನೆನಪಿಸಿದರು. ಆದರೆ, ರಾಜ್ಯಪಾಲರ ಮಾತನ್ನು ನಿರಾಕರಿಸಲಾಯಿತು.

ರಾಷ್ಟ್ರಗೀತೆಗೆ ಅವಮಾನ ಮಾಡಿದ ಸದನದ ಕ್ರಮಕ್ಕೆ ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದರು” ಎಂದು ತಿಳಿಸಲಾಗಿದೆ. ಕಳೆದ ವರ್ಷ ಕೂಡ ರಾಜ್ಯಪಾಲ ರವಿ, ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವ ಮೊದಲೇ ಸದನದಿಂದ ಹೊರನಡೆದಿದ್ದರು. ಆಗಲೂ ಅವರು ರಾಷ್ಟ್ರಗೀತೆಯನ್ನು ಸದನದಲ್ಲಿ ಹಾಡದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

Related Posts

Leave a Reply

Your email address will not be published. Required fields are marked *