Menu

ವಿಮೆ ಸೇರಿ ರೈತರಿಗೆ ಎಲ್ಲ ಪರಿಹಾರ ನೀಡಲು ಪ್ರಯತ್ನ: ಬೆಳೆ ಹಾನಿ ಪರಿಶೀಲನೆ ಬಳಿಕ ಸಚಿವ ಲಾಡ್‌ ಭರವಸೆ

ಧಾರವಾಡ ಜಿಲ್ಲೆಯ ರೈತರು ಈ ಬಾರಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು,ಸುಮಾರು 2.90 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿಯಲ್ಲಿ ಶೇ.96ರಷ್ಟು, ಅಂದರೆ 2.80 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ನಡೆದಿದೆ.  45 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಹೆಸರು ಹಾಗೂ ಉದ್ದು, 40 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಇದಲ್ಲದೆ ಸೋಯಾಬೀನ್, ಹತ್ತಿ, ಕಡಲೆಕಾಯಿ, ಕಬ್ಬು, ಈರುಳ್ಳಿ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳೂ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಚಿವ ಸಂತೋಷ ಲಾಡ್  ಹೇಳಿದರು.

ಧಾರವಾಡ ತಾಲೂಕಿನ ಹಾರೋಬೆಳವಡಿ ಮತ್ತು ನವಲಗುಂದ ತಾಲೂಕಿನ ಶಿರೂರ, ಶಿರಕೋಳ, ಮೊರಬ ಹಾಗೂ ತಿರ್ಲಾಪುರ ಗ್ರಾಮಗಳ ಹೊಲಗಳಿಗೆ ಸಚಿವ ಲಾಡ್  ಭೇಟಿ ನೀಡಿ ಪರಿಶೀಲನೆ ಬಳಿಕ ಈ ವಿಚಾರ ತಿಳಿಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಬೆಳೆಗಳ ವಾಸ್ತವ ಸ್ಥಿತಿ ಪರಿಶೀಲಿಸಲಾಗುತ್ತಿದೆ. ಸ್ಥಳೀಯ ರೈತರು, ರೈತ ಮುಖಂಡರು ಹಾಗೂ ತಾಂತ್ರಿಕ ತಜ್ಞರೊಂದಿಗೆ ಚರ್ಚೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತಿದೆ., ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು.  ಬೆಳೆಗಳು ಕುಂಠಿತ ಬೆಳವಣಿಗೆ ಹೊಂದಿದ್ದು, ರೈತರಿಗೆ ಹೆಚ್ಚಿನ ನಷ್ಟ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ  ಹೆಚ್ಚು ಮಳೆಯಾಗಿದ್ದರೂ ಅದು ಸಮರ್ಪಕ ಸಮಯದಲ್ಲಿ ಹಾಗೂ ಸಮಾನವಾಗಿ ಸುರಿಯದ ಕಾರಣ ಬೆಳೆಗಳಿಗೆ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಳೆ ವಿಮೆ ಸೇರಿದಂತೆ ಸರ್ಕಾರದಿಂದ ಹಾಗೂ ವಿಮಾ ಸಂಸ್ಥೆಗಳ ಮೂಲಕ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು.ರೈತ ಮುಖಂಡರು ಹಾಗೂ ಶಾಸಕರ ಸಲಹೆಗಳನ್ನು ಸಹ ಸರ್ಕಾರದ ಗಮನಕ್ಕೆ ತರಲಾಗುವುದು. ರೈತರ ಪರವಾಗಿ ಬಂದಿರುವ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ನಿಗದಿತ ತಾಂತ್ರಿಕ ಮಾನದಂಡಗಳಿದ್ದು, ಅವುಗಳನ್ನು ಅನುಸರಿಸಿ ಮಾತ್ರ ನಿರ್ಧಾರ ಕೈಗೊಳ್ಳಬೇಕಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರ ಸಮಸ್ಯೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಅಗತ್ಯ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಮುಂದಿನ ಕ್ರಮಕ್ಕೆ ಸಹಕರಿಸಲಾಗುವುದು ಎಂದರು.

ನವಲಗುಂದ ಶಾಸಕರಾದ ಎನ್.ಎಚ್ ಕೋನರೆಡ್ಡಿ ಮಾತನಾಡಿ. ಅಲ್ಪ ಪ್ರಮಾಣದ ಮಳೆಯಾಗಿದ್ದರೂ ಹೆಸರು ಹಾಗೂ ಹತ್ತಿ ಬೆಳೆಗಳು ಹೊರನೋಟಕ್ಕೆ ಹಸಿರಾಗಿ ಕಂಡರೂ ಒಳಗೆ ಬೆಳೆ ಇಲ್ಲದಂತಾಗಿದೆ. ಹೆಸರು ಬೆಳೆ ಹೂ ಬಿಡದೆ  ಮುಗಿಯುವ ಸ್ಥಿತಿ ಎದುರಾಗಿದೆ. ಹತ್ತಿ ಬೆಳೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಬರುತ್ತಿಲ್ಲ. ಸಾಮಾನ್ಯವಾಗಿ ಹೆಚ್ಚು ಕಾಯಿ ಬಿಡಬೇಕಾದ ಬೆಳೆ  5ರಿಂದ 10 ಕಾಯಿ ಮಾತ್ರ ಬಿಡುತ್ತಿರುವ ಪರಿಸ್ಥಿತಿ ಇದೆ. ಆದ್ದರಿಂದ ಸರ್ಕಾರವು ಪರಿಹಾರ ನೀಡುವ ಸಂದರ್ಭದಲ್ಲಿ ಮಾನದಂಡಗಳನ್ನು ಸ್ವಲ್ಪ ಸಡಿಲಿಸಿ, ರೈತರಿಗೆ ಅನುಕೂಲವಾಗುವ ರೀತಿ ಅಂಕಿ-ಅಂಶಗಳನ್ನು ಸಿದ್ಧಪಡಿಸಬೇಕು ಎಂದು ಹೇಳಿದರು.

ಕುಂದಗೋಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರಗುಪ್ಪಿ, ಯರಗುಪ್ಪಿ, ಮುಲ್ಲೊಳ್ಳಿ, ಯೆರಿನಾರಾಯಣಪುರ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ಸಚಿವರು  ಬೆಳೆಹಾನಿಯ ಪರಿಶೀಲನೆ ನಡೆಸಿದರು. ಕ್ಷೇತ್ರದ ಅನಾವೃಷ್ಟಿಯ ಸಮಗ್ರ ವಿವರವನ್ನು ಪಡೆಯಲಾಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದರಿಂದ ಬೆಳೆಗಳಿಗೆ ಹಾನಿಯಾಗಿದ್ದು, ಬರ ಪರಿಸ್ಥಿತಿ ಉಂಟಾಗಬಹುದು. ಬರ ಪರಿಸ್ಥಿತಿ ಕುರಿತು ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಅಣ್ಣಿಗೇರಿ ಹಾಗೂ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ಶೇ. 96 ರಷ್ಟು ಬಿತ್ತನೆ ಅಂದರೆ 2.80 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. 45 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಹೆಸರು ಬೆಳೆ ಬೆಳೆಯಲಾಗಿದೆ. ಸೋಯಾಬಿನ್, ಮೆಕ್ಕೆಜೋಳ, ಹತ್ತಿ, ಉದ್ದು ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಹೆಸರು ಬೆಳೆಯು ಅಪಾರ ಪ್ರಮಾಣದಲ್ಲಿ ಹಾನಿಗೆ ಒಳಗಾಗಿದೆ. ಹತ್ತಿ, ಉಳ್ಳಾಗಡ್ಡಿ ಸೇರಿದಂತೆ ಉಳಿದ ಬೆಳೆಗಳುಹಾನಿಯಾಗಿವೆ ಎಂದರು.

ಬೆಳೆ ಹಾನಿ ಸಮೀಕ್ಷೆ  ನಡೆಯಲಿದೆ. ಮುಂದಿನ ದಿನಗಳಲ್ಲಿ  ಬೆಳೆಗಳ ಬೆಳೆ ವಿಮೆ ಸರ್ವೇ ಕಾರ್ಯ ನಡೆಯುತ್ತದೆ.  ಹೆಸರು ಬೆಳೆಯ ಬೆಳೆ ವಿಮೆ ಕುರಿತು ವಿಮಾ ಸಂಸ್ಥೆಯವರು ಭೇಟಿ ನೀಡಲಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಳೆ ವಿಮೆ ಸೇರಿದಂತೆ ಸರ್ಕಾರದಿಂದ ಹಾಗೂ ವಿಮಾ ಸಂಸ್ಥೆಗಳ ಮೂಲಕ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

Related Posts

Leave a Reply

Your email address will not be published. Required fields are marked *