Menu

ಬೆಂಗಳೂರಿನಲ್ಲಿ ಕಳೆದ ಏಳು ತಿಂಗಳಲ್ಲಿ ಸೈಬರ್‌ ವಂಚಕರು ದೋಚಿದ್ದು 558 ಕೋಟಿ ರೂ.

Cyber fraud

ಬೆಂಗಳೂರಿನಲ್ಲಿ ಕಳೆದ ಏಳು ತಿಂಗಳಲ್ಲಿ ಒಟ್ಟು 4,712 ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗಿದ್ದು, ಜನರು 558 ಕೋಟಿ ರೂ. ಕಳೆದುಕೊಂಡಿದ್ದಾರೆ.  ನಗರದಲ್ಲಿ ಇಂಜಿನಿಯರ್‌ಗಳು, ವೈದ್ಯರು, ಶಿಕ್ಷಕರು, ಬ್ಯಾಂಕ್‌ ಸಿಬ್ಬಂದಿ, ಹಿರಿಯ ನಾಗರಿಕರು, ಗೃಹಿಣಿಯರನ್ನು ಗುರಿಯಾಗಿಸಿಕೊಂಡು ಸೈಬರ್‌ ವಂಚಕರು ಮೋಸದ ಜಾಲವನ್ನು ಬೀಸುತ್ತಿದ್ದಾರೆ.

ಪ್ರತಿದಿನ ಸರಾಸರಿ 22 ಸೈಬರ್ ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದು, ಪ್ರತಿನಿತ್ಯ 2.63 ಕೋಟಿ ರೂಪಾಯಿ ವಂಚನೆಯಾಗುತ್ತಿದೆ ಎಂದು ಗೃಹ ಇಲಾಖೆಯ ಅಧಿಕೃತ ಮಾಹಿತಿ ನೀಡಿದೆ. ಸೈಬರ್‌ ವಂಚಕರು ನಾನಾ ಮಾರ್ಗಗಳನ್ನು ಬಳಸಿ ವಂಚಿಸುತ್ತಾರೆ, ಹೆಚ್ಚಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಗೆ ಹೆಚ್ಚಿನ ಪ್ರತಿಫಲದ ಆಮಿಷ ಒಡ್ಡುತ್ತಾರೆ. ಕಳೆದ ಏಳು ತಿಂಗಳಲ್ಲಿ ಇಂಥ 903 ಪ್ರಕರಣ ದಾಖಲಾಗಿವೆ.

ಆನ್‌ಲೈನ್ ಹಣ ವರ್ಗಾವಣೆ 656, ಒಟಿಪಿ 392, ಪಾರ್ಟ್‌ಟೈಂ ಉದ್ಯೋಗ ಮತ್ತು ರಿವ್ಯೂ ಹೆಸರಿನಲ್ಲಿ 385 ಹಾಗೂ ಕ್ರೆಡಿಟ್ ಕಾರ್ಡ್ ವಂಚನೆಗೆ ಸಂಬಂಧಿಸಿದ 234 ಪ್ರಕರಣಗಳು ದಾಖಲಾಗಿವೆ. ವಂಚಕರು ಮೊದಲಿಗೆ ಕಡಿಮೆ ಹೂಡಿಕೆಗೆ ಹೆಚ್ಚಿನ ಲಾಭದ ಆಸೆ ತೋರಿಸಿ ನಂಬಿಕೆ ಗಳಿಸಿ ಕೊನೆಗೆ ದೊಡ್ಡ ಮೊತ್ತದ ಹಣ ಪಡೆದು ನಾಪತ್ತೆಯಾಗುತ್ತಾರೆ.

ಹಣ ಕಳೆದುಕೊಂಡ ತಕ್ಷಣ ಹಲವು ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸಿದ ಕಾರಣ, ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ತಕ್ಷಣವೇ ಬ್ಯಾಂಕುಗಳೊಂದಿಗೆ ಸಮನ್ವಯ ಸಾಧಿಸಿ ವಂಚಕರ ಖಾತೆಗಳಲ್ಲಿದ್ದ 191 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿಸಿ ಸಂತ್ರಸ್ತರಿಗೆ ವಾಪಸ್ ಕೊಡಿಸುತ್ತಿದ್ದಾರೆ. ಏಳು ತಿಂಗಳಲ್ಲಿ ಶೇ. 34 ಹಣ ರಿಕವರಿ ಆಗಿದೆ.

ಸೈಬರ್ ವಂಚನೆಗೆ ಒಳಗಾದ ತಕ್ಷಣ ಮೊದಲ 1 ರಿಂದ 2 ಗಂಟೆಗಳು ಗೋಲ್ಡನ್ ಅವರ್, ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ದೂರು ದಾಖಲಿಸಿದರೆ ಹಣ ವಾಪಸ್ ಪಡೆಯುವ ಸಾಧ್ಯತೆ ಶೇ. 90 ರಷ್ಟು ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅತಿ ಲಾಭದ ಆಮಿಷ ಒಡ್ಡುವ ಜಾಹೀರಾತುಗಳು ಮತ್ತು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *