ಸಚಿವ ಬಿ.ನಾಗೇಂದ್ರ ಕಳಂಕಿತರಾಗಿದ್ದು, ಮುಖ್ಯಮಂತ್ರಿಗೆ ಬೆದರಿಕೆ ಹಾಕಿರುವುದರಿಂದಲೇ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಲು ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟರಿಗೆ ಸೇರಿದ 187 ಕೋಟಿ ರೂ. ಹಣವನ್ನು ಲೂಟಿ ಮಾಡಿದ ಆರೋಪ ಸಚಿವ ಬಿ.ನಾಗೇಂದ್ರ ಅವರ ಮೇಲಿದೆ. ಅವರು ಕಳಂಕಿತರಾಗಿದ್ದು, ಕೋರ್ಟ್ ಆದೇಶವನ್ನು ಉಲ್ಲಂಘಿಸಿ ದೆಹಲಿಗೆ ಪ್ರಯಾಣ ಮಾಡಿದ್ದಾರೆ. ಅವರ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದೆ. ಅವರಿಗೆ ಸಚಿವ ಸಂಪುಟದಲ್ಲಿ ಇರಲು ಯೋಗ್ಯತೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬೆದರಿಕೆ ಹಾಕಿರುವುದರಿಂದ ನಾಗೇಂದ್ರ ಸಚಿವರಾಗಿರಬಹುದು. ನಿಗಮದ ಹಣವನ್ನು ಕಾಂಗ್ರೆಸ್ ಚುನಾವಣೆಗೆ ಬಳಸಿದೆ. ಈ ಹಣ ಎಲ್ಲಿ ಬಳಕೆಯಾಗಿದೆ, ಎಲ್ಲಿಗೆ ರವಾನೆಯಾಗಿದೆ ಎಂಬ ಬಗ್ಗೆ ಸಿಬಿಐ ತನಿಖೆಯ ಚಾರ್ಜ್ಶೀಟ್ನಲ್ಲಿ ವಿವರವಿದೆ. ಅವರು ರಾಜೀನಾಮೆ ಕೊಟ್ಟಿದ್ದು ಏಕೆ ಎಂದು ಎಲ್ಲರಿಗೂ ಗೊತ್ತಿದೆ. ಕಳಂಕಿತರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿದರೆ ಅದರಿಂದ ಇಡೀ ಸಂಪುಟ ಕಳಂಕಿತವಾಗುತ್ತದೆ ಎಂದರು.
ಇದರ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ. ಸದನದ ಒಳಗೆ ಹಾಗೂ ಹೊರಗೆ ಕೂಡ ಹೋರಾಟ ನಡೆಯಲಿದೆ. ಬಿಡದಿ ಟೌನ್ಶಿಪ್ ಯೋಜನೆ, ಸಚಿವ ನಾಗೇಂದ್ರ ಅವರ ಮೇಲಿನ ಆರೋಪ, ಕೆಪಿಎಸ್ಸಿ ಹಗರಣ ಮೊದಲಾದ ವಿಷಯಗಳ ವಿರುದ್ಧ ಜೆಡಿಎಸ್ ಜೊತೆಗೆ ಸೇರಿ ಒಂದಾಗಿ ಹೋರಾಟ ಮಾಡಲಾಗುವುದು. ಈವರೆಗೆ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದೇ ಚರ್ಚೆಯಾಗುತ್ತಿತ್ತು. ಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದ ನಂತರ ಇನ್ನೂ ಖಾತೆಯ ಕ್ಯಾತೆಯೇ ಚರ್ಚೆಯಾಗುತ್ತಿದೆ. ಶಾಸಕರು ಹಾಗೂ ಅವರ ಬೆಂಬಲಿಗರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರ ಆಡಳಿತ ನಡೆಸದೆ ಕೇವಲ ಇಂತಹ ವಿಷಯಗಳಲ್ಲೇ ಕಾಲಹರಣ ಮಾಡುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ತೊಲಗಿಸಬೇಕಿದೆ ಎಂದು ಹೇಳಿದರು.


