ಗೌರಿ-ಗಣೇಶ ಹಬ್ಬಕ್ಕಾಗಿ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ಒಟ್ಟು 2,400 ಹೆಚ್ಚುವರಿ ವಿಶೇಷ ಬಸ್ಗಳನ್ನು ಓಡಿಸಲು ನಿರ್ಧರಿಸಿದೆ.
ಸೆಪ್ಟೆಂಬರ್ 11ರಿಂದ 13ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ವಿಶೇಷ ಬಸ್ಗಳು ಸಂಚರಿಸಲಿವೆ. ಸೆಪ್ಟೆಂಬರ್ 14ರಂದು ವಿವಿಧ ಜಿಲ್ಲೆಗಳು ಹಾಗೂ ಅಂತರರಾಜ್ಯ ಪ್ರದೇಶಗಳಿಂದ ಬೆಂಗಳೂರಿಗೆ ವಾಪಸ್ ಆಗುವ ಪ್ರಯಾಣಿಕರಿಗಾಗಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರ ಬೇಡಿಕೆ ಮತ್ತು ಸಂಚಾರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲು ನಿಗಮ ಸಿದ್ಧತೆ ನಡೆಸಿದೆ. ರಾಜ್ಯದ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಂದಲೂ ಪ್ರಯಾಣಿಕರ ಸಂಖ್ಯೆ ಗಮನಿಸಿ ವಿಶೇಷ ಸಾರಿಗೆ ವ್ಯವಸ್ಥೆ ಒದಗಿಸಸಲಾಗುತ್ತದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜ್ಯದ ಹಲವು ಪ್ರಮುಖ ನಗರಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ವಿಶೇಷ ಬಸ್ಗಳು ಸಂಚರಿಸಲಿವೆ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಾರವಾರ, ಕಲಬುರಗಿ, ಬಳ್ಳಾರಿ ಸೇರಿದಂತೆ ಹಲವು ಮಾರ್ಗಗಳಿಗೆ ಪ್ರಯಾಣಿಕರಿಗೆ ಹೆಚ್ಚುವರಿ ಬಸ್ಗಳು ಲಭ್ಯವಿರಲಿವೆ.
ಆಂಧ್ರಪ್ರದೇಶ, ತೆಲಂಗಾಣದ ಪ್ರಮುಖ ನಗರಗಳಾದ ಹೈದರಾಬಾದ್, ವಿಜಯವಾಡ ಹಾಗೂ ತಿರುಪತಿ ಕಡೆಗೂ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ, ಹುಣಸೂರು, ಕುಶಾಲನಗರ ಹಾಗೂ ವಿರಾಜಪೇಟೆ ಸೇರಿದಂತೆ ವಿವಿಧ ಮಾರ್ಗಗಳಿಗೆ ವಿಶೇಷ ಬಸ್ಗಳು ಸಂಚರಿಸಲಿವೆ.
ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪ್ರಮುಖ ನಗರಗಳಿಗೆ ತೆರಳುವ ಪ್ರಯಾಣಿಕರಿಗೂ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಂತಿನಗರದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದಿಂದ ಚೆನ್ನೈ, ಕೊಯಂಬತ್ತೂರು, ಮಧುರೈ, ಪಾಲಕ್ಕಾಡ್, ತ್ರಿಶೂರ್ ಹಾಗೂ ಏರ್ನಾಕುಲಂ ಮಾರ್ಗಗಳಿಗೆ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರು KSRTCಯ ಅಧಿಕೃತ ವೆಬ್ಸೈಟ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಟಿಕೆಟ್ ಕಾಯ್ದಿರಿಸಿದರೆ ಶೇ ೫ ರಿಯಾಯಿತಿ ಇರುತ್ತದೆ. ಹೋಗುವ ಮತ್ತು ಬರುವ ಟಿಕೆಟ್ ಬುಕ್ ಮಾಡಿದರೆ ವಾಪಸ್ ಪ್ರಯಾಣದ ದರದಲ್ಲಿ ಶೇ.10 ರಿಯಾಯಿತಿ ನೀಡಲಾಗುತ್ತಿದೆ.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯ ಪ್ರಮುಖ ನಗರಗಳಲ್ಲಿರುವ KSRTC ಕೌಂಟರ್ಗಳ ಮೂಲಕವೂ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.
ಬಸ್ ನಿಲ್ದಾಣಕ್ಕೆ ತೆರಳುವ ಮೊದಲು ಪ್ರಯಾಣಿಕರು ಟಿಕೆಟ್ನಲ್ಲಿ ನಮೂದಿಸಿರುವ ನಿರ್ದಿಷ್ಟ ಪಿಕ್ಅಪ್ ಪಾಯಿಂಟ್ ಹಾಗೂ ಬಸ್ ನಿಲ್ದಾಣದ ಹೆಸರನ್ನು ಪ್ರಯಾಣಿಕರು ಸರಿಯಾಗಿ ಪರಿಶೀಲಿಸಿಕೊಳ್ಳುವಂತೆ ಕೆಎಸ್ಸಾರ್ಟಿಸಿ ಮನವಿ ಮಾಡಿದೆ.


