Menu

ಮಾತು ತಪ್ಪಿದ ಸಿಎಂ, ಕಾಂಗ್ರೆಸ್‌ನಲ್ಲಿ ದಂಗೆ: ಪ್ರತಿಪಕ್ಷ ನಾಯಕ ಆರ್‌ ಅಶೋಕ

ಸಿಎಂ ಡಿಕೆಶಿವಕುಮಾರ್‌ ಅವರ ಹಳೆ ಸಿನಿಮಾದ ಹೊಸ ಪೋಸ್ಟರ್‌ ಬಿಡುಗಡೆಯಾಗುವ ಮುನ್ನವೇ ದಂಗೆ ಶುರುವಾಗಿದೆ. ಪ್ರಮಾಣ ವಚನ ಸ್ವೀಕಾರವಾದ ಮೂರೇ ದಿನಗಳಲ್ಲಿ ಪಕ್ಷ ಮೂರು ಬಾಗಿಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗಾರೆಡ್ಡಿಯವರಿಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಹೊಣೆ ನೀಡುವುದಾಗಿ ಹೇಳಿದ್ದ ಸಿಎಂ ಡಿ.ಕೆ.ಶಿವಕುಮಾರ್‌, ಈಗ ಮಾತು ತಪ್ಪಿದ್ದಾರೆ. ಅದಕ್ಕಾಗಿ ಅವರು ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನ ಅನುಭವ ಇರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಹೀಗೆ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಆರಂಭದಲ್ಲೇ ಕೊಟ್ಟ ಮಾತಿಗೆ ತಪ್ಪಿ ನಡೆಯುವ ಚಾಳಿಯನ್ನು ತೋರಿಸಿದ್ದಾರೆ. ಸತೀಶ್‌ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಮಾಡುತ್ತೇನೆಂದು ಮಾತು ಕೊಟ್ಟಿದ್ದರು. ಎಚ್‌.ಕೆ.ಪಾಟೀಲ್‌ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರತಿಪಕ್ಷಕ್ಕೆ ಉತ್ತರ ಕೊಡಲು ಗತಿ ಇಲ್ಲದಂತಾಗಿದೆ. ಸಮರ್ಥವಾದ ಆಡಳಿತ ಪಕ್ಷ ಕಳೆದುಹೋಗಿ ಎಲ್ಲ ಶೂನ್ಯವಾಗಿದೆ. ಈಗ ನಾವು ಯಾರ ಜೊತೆ ಚರ್ಚೆ ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಸಂಪುಟದ ಮೇಲೆ ಹಿಡಿತ ಇಲ್ಲ ಎಂದರು.

ಈ ನಡುವೆ ಕೆ.ಎಚ್‌.ಮುನಿಯಪ್ಪ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಎಲ್ಲರೂ ಖಾತೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನು ಒಂದೂವರೆ ವರ್ಷದಲ್ಲಿ ಚುನಾವಣೆ ಬರಲಿದೆ. ಅದಕ್ಕೆ ಮುನ್ನವೇ ದಂಗೆ ಆರಂಭವಾಗಿದ್ದು, ಮುಂದೆ ಇದು ಜ್ವಾಲಾಮುಖಿಯಾಗಲಿದೆ. ಮುಂದೆ ಎಷ್ಟು ಸಚಿವರು ಈ ರೀತಿ ಧಮಕಿ ಹಾಕುತ್ತಾರೋ ಎಂದು ತಿಳಿದಿಲ್ಲ. ಇದರ ಜೊತೆಗೆ ಹೊಸ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ. 3000 ಕೋಟಿ ರೂ. ಪಿಂಚಣಿ ಬಾಕಿ ನೀಡಬೇಕಿದೆ. ಇಂತಹ ಸ್ಥಿತಿಯಲ್ಲಿ ಹೊಸ ಯೋಜನೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸಿಎಂ ಡಿಕೆಶಿವಕುಮಾರ್‌  ಆಡಂಬರ ಮಾತು ತೋರಿಸುತ್ತಿದ್ದಾರೆ. ಬ್ರ್ಯಾಂಡ್‌ ಬೆಂಗಳೂರು, ವಿಶ್ವಮಟ್ಟದ ನಗರ ಎಂದೆಲ್ಲ ಹೇಳಿ ಮೂರು ವರ್ಷದಲ್ಲಿ ಏನೂ ಮಾಡಿಲ್ಲ. ಬೆಂಗಳೂರು ಈಗ ಗುಂಡಿಗಳ ನಗರ, ಕಸದ ನಗರವಾಗಿದೆ. ರೌಡಿಗಳ ನಿಗ್ರಹ ದಳವನ್ನು ರಚನೆ ಮಾಡುತ್ತಿರುವುದನ್ನು ಕಂಡು ಎಲ್ಲರೂ ನಗುತ್ತಿದ್ದಾರೆ. ಬಿ.ಕೆ.ಹರಿಪ್ರಸಾದ್‌ ಹಾಗೂ ಡಿ.ಕೆ.ಶಿವಕುಮಾರ್‌ ಅವರಿಂದ ರೌಡಿಗಳ ನಿಗ್ರಹ ಸಾಧ್ಯವೇ? ಇದನ್ನು ಯಾರೂ ನಂಬುವುದಿಲ್ಲ. ರಾಹುಲ್‌ ಗಾಂಧಿಗೆ ವಸೂಲಿ ಮಾಡಿಕೊಡಲು ಮಾತ್ರ ಡಿ.ಕೆ.ಶಿವಕುಮಾರ್‌ ಸಿಎಂ ಆಗಿದ್ದಾರೆ. ಇಷ್ಟು ಗೊಂದಲ ಇರುವಾಗ ಮಧ್ಯಂತರ ಚುನಾವಣೆ ಖಚಿತ. 2028 ರ ಚುನಾವಣೆ ನಡೆದರೂ ಅಲ್ಲಿ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇರಲ್ಲ ಎಂದರು.

ಕನ್ನಡಿಗರು ಬಹುಶಃ ಸೂರ್ಯನೇ ಹುಟ್ಟದ ದಿನ ನೋಡಬಹುದೇನೋ, ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ಇಲ್ಲದ ದಿನ ನೋಡಲು ಸಾಧ್ಯವೇ ಇಲ್ಲ. ಇನ್ನು ಎರಡು ವರ್ಷ ನಡೆಯಲಿರುವ ಕಾಂಗ್ರೆಸ್‌ ಸರ್ಕಾರದ ಈ ನಿತ್ಯ ಕಚ್ಚಾಟಕ್ಕೆ ತೇಪೆ ಹೆಚ್ಚಲು ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೆವಾಲ  ಬೆಂಗಳೂರಿನಲ್ಲೇ ಒಂದು ಮನೆ ಮಾಡಿಕೊಂಡು ಇಲ್ಲೇ ಇದ್ದುಬಿಟ್ಟರೆ ಒಳ್ಳೆಯದು ಎಂದು ಟ್ವೀಟ್‌ ಮಾಡಿದ್ದಾರೆ.

ಮಂತ್ರಿ ಮಾಡಲಿಲ್ಲವೆಂದು ಪ್ರಮಾಣ ವಚನ ಸಮಾರಂಭದಿಂದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅರ್ಧದಲ್ಲೇ ಎದ್ದು ಹೋದರು. ಕೊಟ್ಟ ಮಾತಿನಂತೆ ಹೇಳಿದ ಖಾತೆ ಕೊಡಲಿಲ್ಲ ಎಂದು ಬಹಿರಂಗವಾಗಿ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಕೊಟ್ಟರು. ನನ್ನ ಹಿರಿತನಕ್ಕೆ, ಸಾಮರ್ಥ್ಯಕ್ಕೆ ತಕ್ಕಂತ ಖಾತೆ ಬದಲಾವಣೆ ಮಾಡುವವವರೆಗೂ ಕೊಟ್ಟ ಖಾತೆಯ ಚಾರ್ಜ್ ತೆಗೆದುಕೊಳ್ಳುವುದಿಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ಇಷ್ಟಾದರೂ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದು ಕನ್ನಡಿಗರು ನಂಬಬೇಕಂತೆ. ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದ ತಪ್ಪಿಗೆ ಕನ್ನಡಿಗರು ಇನ್ನೂ ಏನೇನು ನೋಡಬೇಕೋ ಆ ದೇವರೇ ಬಲ್ಲ ಎಂದಿದ್ದಾರೆ.

ವಿಕೆಟ್ಟುಗಳೇನೋ ಬೀಳುತ್ತಿವೆ. ಇನ್ನಷ್ಟು ವಿಕೆಟ್‌ಗಳು ಬೀಳುವ ಲಕ್ಷಣಗಳೂ ಇವೆ. ಆದರೆ ಈ ವಿಕೆಟ್ಟುಗಳನ್ನು ಉರುಳಿಸುತ್ತಿರುವ ಆ ಸಿದ್ಧಹಸ್ತ ಸ್ಪಿನ್ ಬೌಲರ್ ಯಾರು? ಫೀಲ್ಡಿಂಗ್ ಸೆಟ್ ಮಾಡಿರುವ ನಾಯಕ ಯಾರು? ಆ ಸ್ಪಿನ್ ಬೌಲರ್ ಕೈ ಚಳಕದಿಂದ ಅವಧಿಗೂ ಮುನ್ನವೇ ಸರ್ಕಾರ ಆಲೌಟ್ ಆದರೂ ಅಚ್ಚರಿ ಇಲ್ಲ ಎಂದು  ವ್ಯಂಗ್ಯವಾಡಿದ್ದಾರೆ.

Related Posts

Leave a Reply

Your email address will not be published. Required fields are marked *