Thursday, January 30, 2025
Menu

ಬೀದಿ ಬದಿ ವ್ಯಾಪಾರ ರಸ್ತೆಗಳ ಗುರುತಿಸಲು ತುಷಾರ್ ಗಿರಿನಾಥ್ ಸೂಚನೆ

ಬೆಂಗಳೂರು ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಮಾರ್ಗಸೂಚಿಯ ಅನುಸಾರ ಗುರುತಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಶ್ಚಿಮ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ”ಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ ಬೀದಿ ಬದಿ ವ್ಯಾಪಾರಿಗಳು, ವ್ಯಾಪಾರ ವಲಯವನ್ನು ಗುರುತಿಸುವವರೆಗೆ ಯಾವುದೇ ರೀತಿಯ ಸಮಸ್ಯೆ ಮಾಡದಂತೆ ಮನವಿ ಮಾಡಿದರು.

ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಪಶ್ಚಿಮ ವಲಯದಲ್ಲಿ ಈಗಾಗಲೇ 7000 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಪಾಲಿಕೆ ವತಿಯಿಂದ ವೆಂಡಿಂಗ್ ಝೋನ್‌ಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಈ ಸಂಬಂಧ ವೆಂಡಿಂಗ್ ಝೋನ್ ಗುರುತಿಸುವವರೆಗೆ ಯಾವ್ಯಾವ ರಸ್ತೆಗಳಲ್ಲಿ ವ್ಯಾಪಾರ ಮಾಡಬಹುದು ಎಂಬುದನ್ನು ಪರಿಶೀಲಿಸಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯಾವ್ಯಾವ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಸ್ತರು ವ್ಯಾಪಾರ ಮಾಡಬಹುದು ಎಂಬುದನ್ನು ಗುರುತಿಸಬೇಕು. ಅನಂತರ ಪಾದಚಾರಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಪಾದಚಾರಿ ಮಾರ್ಗದಲ್ಲಿ ಮಾರ್ಕಿಂಗ್ ಮಾಡಿ (ಗಡಿ ಗುರುತಿಸಿ) ಅವರಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡಲು ಹೇಳಿದ್ದಾರೆ.

ಪಾದಚಾರಿ ಮಾರ್ಗದಲ್ಲಿ ಶಾಶ್ವತ ಪೆಟ್ಟಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರೆ ಅದನ್ನು ತೆರವುಗೊಳಿಸಬೇಕು. ಪಾದಚಾರಿಗಳ ಓಡಾಟಕ್ಕೆ ಅವಕಾಶವಿರಬೇಕು. ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವಂತಿಲ್ಲ. ಇದರ ಜೊತೆಗೆ ಪಾದಚಾರಿ ಮಾರ್ಗದಲ್ಲಿ ಬರುವ ಅಂಗಡಿ/ಮುಂಗಟ್ಟುಗಳ ಮುಂಭಾಗದ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ಪರಿಶೀಲಿಸಿ ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

Related Posts

Leave a Reply

Your email address will not be published. Required fields are marked *