ರಾಜ್ಯದ ಸುರಕ್ಷತೆ ಮತ್ತು ಹಾಗೂ ಕನ್ನಡಿಗರ ಹಕ್ಕುಗಳಿಗೆ ಧಕ್ಕೆ ತರುವ ಕಾಂಗ್ರೆಸ್ ಸರ್ಕಾರದ ಸಂವಿಧಾನಬಾಹಿರ ‘ಶಾಶ್ವತ ನಿವಾಸ ಪ್ರಮಾಣಪತ್ರ’ (PRC) ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ, ರಾಜ್ಯ ಬಿಜೆಪಿ ನಿಯೋಗದೊಂದಿಗೆ ರಾಜ್ಯಪಾಲ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಲೋಕಭವನದಲ್ಲಿ ಭೇಟಿ ಮಾಡಿ ಅಧಿಕೃತ ಮನವಿ ಸಲ್ಲಿಸಲಾಯಿತು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಈ ಪ್ರಸ್ತಾವನೆಯು ಭಾರತದ ಸಂವಿಧಾನದ ಮೂಲ ಆಶಯವನ್ನೇ ಉಲ್ಲಂಘಿಸುತ್ತದೆ. ಪೌರತ್ವ, ವಿದೇಶಿಯರ ಗುರುತಿಸುವಿಕೆ ಹಾಗೂ ವಲಸೆ ಸಂಬಂಧಿತ ವಿಷಯಗಳು ಸಂವಿಧಾನದ ಪ್ರಕಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ‘ಶಾಶ್ವತ ನಿವಾಸ ಪ್ರಮಾಣಪತ್ರ’ ನೀಡುವ ಅಧಿಕಾರವನ್ನು ಸ್ವತಃ ಪಡೆದುಕೊಳ್ಳಲು ಮುಂದಾಗಿರುವುದು ಕಾನೂನುಬಾಹಿರ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೂ ಧಕ್ಕೆ ತರುವಂತಹ ಅಪಾಯಕಾರಿ ನಡೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ನಡೆಯುತ್ತಿರುವಾಗ ಇಂತಹ ಸಡಿಲ ನಿಯಮಗಳನ್ನು ಜಾರಿಗೊಳಿಸುವುದು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದಲೂ ಅತ್ಯಂತ ಅಪಾಯಕಾರಿ ಬೆಳವಣಿಗೆ. ಅಕ್ರಮ ವಲಸಿಗರು ನಕಲಿ ದಾಖಲೆಗಳ ಮೂಲಕ ಈ ಪ್ರಮಾಣಪತ್ರ ಪಡೆದು, ಮತದಾನದ ಹಕ್ಕು ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ಈ ಸರ್ಕಾರವೇ ಸೃಷ್ಟಿಸುತ್ತಿದೆ ಎಂಬ ಆತಂಕವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.
ಈ ಪ್ರಮಾಣಪತ್ರ ವಿತರಣೆಯ ಅಧಿಕಾರವನ್ನು ಕಂದಾಯ ಇಲಾಖೆಗೆ ನೀಡಿರುವುದು ಭ್ರಷ್ಟಾಚಾರ, ನಕಲಿ ದಾಖಲೆಗಳ ಸೃಷ್ಟಿ ಮತ್ತು ವ್ಯವಸ್ಥೆಯ ದುರುಪಯೋಗಕ್ಕೆ ಬಾಗಿಲು ತೆರೆಯುವಂತಾಗಿದೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರೂಪಿಸಿರುವ ಈ ಪ್ರಸ್ತಾವನೆಯಿಂದ ಸ್ಥಳೀಯ ಕನ್ನಡಿಗರ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳ ಮೇಲೆಯೇ ಗಂಭೀರ ಪರಿಣಾಮ ಬೀರುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. .
ಈ ಅಧಿಸೂಚನೆಯನ್ನು ಹೊರಡಿಸುವ ಮುನ್ನ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ, ಭಾರತೀಯ ಪೌರತ್ವ ಪರಿಶೀಲನೆಗೆ ಯಾವ ಕಾನೂನುಬದ್ಧ ಕ್ರಮ ಅನುಸರಿಸಲಾಗಿದೆ ಎಂಬ ಕುರಿತು ಸಮಗ್ರ ವರದಿ ಪಡೆದುಕೊಳ್ಳುವಂತೆ ಹಾಗೂ ಈ ವಿವಾದಾತ್ಮಕ ಪ್ರಸ್ತಾವನೆಯನ್ನು ತಕ್ಷಣವೇ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲರನ್ನು ಮನವಿ ಮಾಡಿದ್ದೇವೆ. ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ಬಳಿಕ ನ್ಯಾಯಾಲಯಗಳು ಹಾಗೂ ಲೋಕ ಅದಾಲತ್‌ಗಳ ಮೂಲಕ ವಿತರಿಸಲಾದ ಜನನ ಪ್ರಮಾಣಪತ್ರಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆಯೂ ಕೋರಿದ್ದೇವೆ ಎಂದಿದ್ದಾರೆ.
ಕನ್ನಡಿಗರ ಹಕ್ಕುಗಳು, ಸಂವಿಧಾನದ ಗೌರವ ಮತ್ತು ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ @BJP4Karnataka ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.


