ಬಿಡದಿ ಟೌನ್‌ಶಿಪ್ ಯೋಜನೆ ಕೂಸು ಹುಟ್ಟಿದ್ದು ಕುಮಾರ ಸ್ವಾಮಿ ಆಡಳಿತದ ಅವಧಿಯಲ್ಲಿ, ಬೆಳೆದಿದ್ದು ಬಿಜೆಪಿ ಆಡಳಿತದಲ್ಲಿ. ಈ ಅವಧಿಯಲ್ಲಿ ಬೆಂಗಳೂರು ಹಾಗೂ ಟೌನ್ ಶಿಪ್ ಯೋಜನೆಗೆ ಉಸ್ತುವಾರಿ ಸಚಿವರಾಗಿದ್ದವರು ಆರ್ ಅಶೋಕ, 2006ರಿಂದ ಅವರು ಇದರ ಜವಾಬ್ದಾರಿಯ ಭಾಗವಾಗಿದ್ದರು, ಕಂದಾಯ ಸಚಿವರೂ ಆಗಿದ್ದರು. ಅವರ ಜಾಗವು ಈ ಭಾಗದಲ್ಲಿದೆ. ಅವರು ಅವರ ಪಾಡಿಗೆ ಹೋರಾಟ ಮಾಡುತ್ತಾರೆ, ಇವರು ಇವರ ಪಾಡಿಗೆ ಹೋರಾಟ ಮಾಡುತ್ತಾರೆ. ಇದೆಲ್ಲದಕ್ಕೂ ರಾಜ್ಯ ಸರ್ಕಾರ ಅಂತ್ಯವಾಡುತ್ತದೆ ಎಂದು ಭಾವಿಸಿದ್ದೇನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಮೇಲೆ ಹೊರೆ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಪರ ದಿನನಿತ್ಯ ಮಾತನಾಡುವ ಉದ್ಯಮಿಗಳು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶದಿಂದ ವರ್ಕ್, ಲೀಡ್ ಅಂಡ್ ಪ್ಲೇ ಅಡಿಯಲ್ಲಿ ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬೇರೆ ರಾಜ್ಯಗಳಲ್ಲಿ ಮಾಡಿರುವ ಟೌನ್ ಶಿಪ್ ಮಾದರಿಯಾಗಿ, ನಮ್ಮ ರಾಜ್ಯದಲ್ಲಿ ಐಟಿ ಹಾಗೂ ಇತರ ಕ್ಷೇತ್ರದ ಉದ್ಯಮಗಳಿಗೆ ನೀಡಲಾಗುವ ಮೂಲಭೂತ ಸೌಕರ್ಯ. ಇದರ ಹಿಂದೆ ಯಾವುದೇ ರೀತಿಯ ರಿಯಲ್ ಎಸ್ಟೇಟ್ ಉದ್ದೇಶವಿಲ್ಲ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನವರು ಹೇಳಿಕೆ ನೀಡುತ್ತಿದ್ದಾರೆ. ಈ ಯೋಜನೆಯಲ್ಲಿ ಲೂಟಿ ಮಾಡಲು ಅವಕಾಶ ಎಲ್ಲಿದೆ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಈ ಯೋಜನೆಯನ್ನು ಬಿಎಂಆರ್ ಡಿಎ ಮೂಲಕ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿ, ಜಾಗ ಸ್ವಾಧೀನ ಪಡಿಸಿಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಿ, ಉಳಿಕೆ ಜಾಗವನ್ನು ಉದ್ಯಮಿಗಳಿಗೆ ನೀಡಿದ ಬಳಿಕ ಅವರು ಅಲ್ಲಿ ತಮ್ಮ ಕಂಪನಿ ಸ್ಥಾಪಿಸುತ್ತಾರೆ. ಎಲ್ಲವನ್ನು ನೋಂದಣಿ ಮೂಲಕವೇ ಮಾಡಲಾಗುವುದು. ಇಲ್ಲಿ ಯಾವುದೇ ಮಧ್ಯವರ್ತಿಗಳು, ಸರ್ಕಾರ ಅಥವಾ ಡಿಕೆ ಶಿವಕುಮಾರ್ ಹೇಗೆ ದುಡ್ಡು ಹೊಡೆಯುತ್ತಾರೆ ಎಂದು ವಿರೋಧ ಪಕ್ಷಗಳು ಹೇಳಬೇಕು. ಈ ಹಿಂದೆ ನೀವು ಹಣ ಹೊಡೆದಿದ್ದರೆ ಅದರ ಅನುಭವವನ್ನು ಹಂಚಿಕೊಳ್ಳಿ ಎಂದಿದ್ದಾರೆ.
ಇದು ಕಾನೂನು ಬಾಹಿರ ಹೇಗಾಗುತ್ತದೆ ಎಂದು ಹೇಳಿ. 2006ರಲ್ಲಿ ಕುಮಾರಸ್ವಾಮಿ ಅವರು ಅಧಿಸೂಚನೆ ಹೊರಡಿಸಿ, ಡಿಎಲ್ಎಫ್ ಬಳಿ 400 ಕೋಟಿ ಕೋಟಿ ಪಡೆದು, ಅವರಿಗೆ ಜಾಗ ನೀಡದೇ ಒಂದೂವರೆ, ಎರಡು ವರ್ಷ ಕಾಯಿಸಿದ ಪರಿಣಾಮ ಅವರು ನಿಮ್ಮ ಸಹವಾಸ ಸಾಕು ಎಂದು ಈ ಯೋಜನೆಯಿಂದ ಹಿಂದೆ ಸರಿದರು. ಕುಮಾರಸ್ವಾಮಿ ಅವರು ಅಧಿಕಾರದಿಂದ ಹೋಗುವಾಗ ಈ ಪ್ರದೇಶವನ್ನು ರೆಡ್ ಜೋನ್ ಎಂದು ಆದೇಶ ಹೊರಡಿಸುತ್ತಾರೆ. ಈಗಲೂ ಅದು ರೆಡ್ ಜೋನ್ ಆಗಿಯೇ ಉಳಿದಿದೆ. ನಂತರ ಯಡಿಯೂರಪ್ಪನವರು ಈ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಿದರು. ಈ ಟೌನ್ ಶಿಪ್ ಯೋಜನೆ ಜಾರಿಯಾಗಿ ಆ ಪ್ರದೇಶ ಅಭಿವೃದ್ಧಿಯಾಗುವವರೆಗೂ ಇದು ರೆಡ್ ಜೋನ್ ಆಗಿಯೇ ಇರುತ್ತದೆ ಎಂದರು.
ಕುಮಾರಸ್ವಾಮಿ ಯಾವ ಕಾರಣಕ್ಕೆ ರೆಡ್ ಜೋನ್ ಮಾಡಿದರು, ಅಲ್ಲಿ ಯಾವ ಅಭಿವೃದ್ಧಿ ಆಗಬಾರದು ಎಂಬ ಉದ್ದೇಶ. 2011ರಲ್ಲಿ ಸದಾನಂದ ಗೌಡರು ಸಿಎಂ ಆಗಿದ್ದಾಗ,912 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ. ಆಗ ರೈತರಿಗೆ ಪರಿಹಾರವಾಗಿ ನೀಡಿದ್ದು, ಪ್ರತಿ ಎಕರೆಗೆ 60-80 ಲಕ್ಷ ರೂ. ಮಾತ್ರ. ಈ ಎಲ್ಲಾ ಜಾಗವೂ ತೆಂಗು ಹಾಗೂ ಅಡಕೆ ತೋಟವೇ. ಈ ಪ್ರಕ್ರಿಯೆ ವೇಳೆ ಕುಮಾರಸ್ವಾಮಿ ಏನು ಮಾಡುತ್ತಿದ್ದರು, ಬಿಬಿಎಂಪಿ ವ್ಯಾಪ್ತಿಗೆ ಹೊರವಲಯದ ಪ್ರದೇಶಗಳನ್ನು ಸೇರಿಸಿ ರೈತರಿಗೆ ಮೋಸ ಮಾಡಿದ್ದು ನೀವೇ ಅಲ್ಲವೇ, ಆಗ ರೈತರ ಮೇಲೆ ನಿಮ್ಮ ಕನಿಕರ ಎಲ್ಲಿ ಹೋಗಿತ್ತು, ಈಗ ಶಿವಕುಮಾರ್ ಅವರ ಘನತೆ ಕುಗ್ಗಿಸಲು ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಶಿವಕುಮಾರ್ ಸಿಎಂ ಆದ ಬಳಿಕ ಕುಮಾರಸ್ವಾಮಿ ಹಾಗೂ ಅಶೋಕ್ ಅವರಿಗೆ ನಿದ್ದೆ ಬರುತ್ತಿಲ್ಲ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಅಶೋಕ್ ನಾಲಾಯಕ್ ವಿರೋಧ ಪಕ್ಷದ ನಾಯಕರು. ಬಾಯಿಗೆ ಬಂದಂತೆ ಸುಳ್ಳು ಹೇಳುತ್ತಾರೆ. ಇಂತಹ ಸುಳ್ಳು ಹೇಳುವ ವ್ಯಕ್ತಿ ಪ್ರಪಂಚದಲ್ಲೇ ಯಾರು ಇಲ್ಲವೇನೋ. ಸುಳ್ಳು ಹೇಳುವುದರಲ್ಲಿ ಪಿಹೆಚ್ಡಿ ಮಾಡಿಕೊಂಡಿದ್ದಾರೆ. ಕಸದ ಬಗ್ಗೆ ಮಾತನಾಡಿ 39 ಸಾವಿರ ಕೋಟಿ ಹಗರಣ ಎಂದು ಆರೋಪ ಮಾಡಿದರು, ದಾಖಲೆ ಮಾತ್ರ ಬಿಡುಗಡೆ ಮಾಡಲಿಲ್ಲ. ಸುಳ್ಳು ಹೇಳುವುದರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದರು.
ಬಿಡದಿ ಟೌನ್ ಶಿಪ್ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ರಾಜಕೀಯವಾಗಿ ಒಲಿಸಿಕೊಳ್ಳುವ ಪ್ರಯತ್ನ ಮಾಡಬಹುದು. ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆ ಮಾಡಲಾಗುತ್ತಿದೆ. ಈ ಯೋಜನೆಯಿಂದ ಮುಂದೆ ಜನರಿಗೆ ಅನ್ಯಾಯವಾಗುತ್ತದೆ ಎಂದು ಅನಿಸಿದರೆ ಅದಕ್ಕೆ ದಾಖಲೆ ಬಿಡುಗಡೆ ಮಾಡಿ. ಈ ಯೋಜನೆ ವಿರುದ್ಧ ಧರಣಿ ಮಾಡುತ್ತಿರುವ ಜನರಲ್ಲಿ ಕೆಲವು ನೈಜ್ಯ ರೈತರೂ ಇರಬಹುದು. ಈ ಹೋರಾಟಕ್ಕೆ ಕರೆತಂದಿದ್ದವರು ಯಾರು, ರಾಜಕೀಯವಾಗಿ ಸಂಪೂರ್ಣವಾಗಿ ಕಳೆದು ಹೋಗುತ್ತೇವೆ ಎಂಬ ಉದ್ದೇಶದಿಂದ ಜೆಡಿಎಸ್ ಕಾರ್ಯಕರ್ತರನ್ನು ಕರೆತಂದು ಹಸಿರು ಶಾಲು ಹಾಕಿ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.


