ಮುಖ್ಯಮಂತ್ರಿ ಸಿದ್ದರಾಮಯ್ಯ ಗಣಿ ಗುತ್ತಿಗೆ ನವೀಕರಣ ಹೆಸರಲ್ಲಿ 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿರುವುದಾಗಿ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬವರು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
2015ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ 8 ಗಣಿ ಗುತ್ತಿಗೆ ನವೀಕರಣ ಮಾಡಿದ್ದರು. ಹರಾಜು ಹಾಕುವ ಬದಲಿಗೆ ನವೀಕರಣ ಮಾಡಿದ್ದರು. ಗಣಿ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಗಣಿ ಕಂಪೆನಿಗಳ ಲೈಸೆನ್ಸ್ ಕೂಡ ನವೀಕರಣ ಮಾಡಲಾಗಿತ್ತು. ಸಾಕಷ್ಟು ವರ್ಷಗಳಿಂದ ಬಾಕಿ ಇದ್ದ ಲೈಸೆನ್ಸ್ ನವೀಕರಣ ಮಾಡಲಾಗಿತ್ತು. ಹಾಗೆ ನವೀಕರಣ ಮಾಡಿಕೊಟ್ಟಿದ್ದಕ್ಕೆ 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ರಾಮಮೂರ್ತಿ ಗೌಡ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದು, ಇದರಿಂದ ಸರ್ಕಾರಕ್ಕೆ 5000 ಕೋಟಿ ನಷ್ಟ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಸಿದ್ದರಾಮಯ್ಯ ಅವರನ್ನು ಪ್ರಾಸಿಕ್ಯೂಷನ್ ಗೆ ಒಳಪಡಿಸಲು ಅನುಮತಿ ನೀಡಿ ಎಂದು ದೂರಿನಲ್ಲಿ ಕೋರಲಾಗಿದೆ. ದೂರುದಾರರ ಜೊತೆ ರಾಜ್ಯಪಾಲರು ಚರ್ಚೆ ನಡೆಸಿ ಸಹಿ ಮಾಡಿ ಕಾನೂನು ವಿಭಾಗದ ಅಭಿಪ್ರಾಯಕ್ಕೆ ಕಳುಹಿಸಿದ್ದಾರೆ. ಸಾಲಿಸಿಟರ್ ಜನರಲ್ ಬಳಿ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿ ರಾಜ್ಯಪಾಲರು ದೂರುದಾರರಿಗೆ ಭರವಸೆ ನೀಡಿದ್ದಾರೆ.