Saturday, September 19, 2026
Menu

ನೈಸ್ ಅನ್ಯಾಯ ವಾರದಲ್ಲಿ ಬಹಿರಂಗ: ನಿಖಿಲ್‌ ಕುಮಾರಸ್ವಾಮಿ

Nikhil Kumaraswamy

ನೈಸ್ ಯೋಜನೆಯಲ್ಲಿ ನಡೆದಿರುವ ಅನ್ಯಾಯವನ್ನು ವಾರದಲ್ಲಿ ಬಹಿರಂಗ ಮಾಡುತ್ತೇವೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ  ಹೇಳಿದರು.

ಮಾಲೂರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ‘ನೈಸ್ ಯೋಜನೆಯಿಂದಾಗಿ ರೈತರಿಗೆ ದೊಡ್ಡ ಮಟ್ಟದ ಅನ್ಯಾಯವಾಗಿದೆ. ರೈತರಿಗೆ ನ್ಯಾಯ ಕೊಡಿಸಲು ನಿರಂತರ ಹೋರಾಟ ನಡೆಸುತ್ತೇವೆ’ ಎಂದರು.

ಕುಮಾರಸ್ವಾಮಿಗೆ ಅಸಹಕಾರ: ಕೈಗಾರಿಕೆಗಳ ಸ್ಥಾಪನೆ ವಿಚಾರದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಭೂಮಿ, ವಿದ್ಯುತ್‌, ನೀರು ನೀಡುತ್ತಿದೆಯೇ? ರಾಜ್ಯಕ್ಕೆ ಟೆಸ್ಟಿಂಗ್ ಯೂನಿಟ್ ತರಲು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಆದರೆ, ಕುಮಾರಸ್ವಾಮಿ ಅವರಿಗೆ ಒಳ್ಳೆಯ ಹೆಸರು ಬಂದುಬಿಡುತ್ತದೆ ಎಂದು ರಾಜ್ಯ ಸರ್ಕಾರ ಈ ವಿಷಯದಲ್ಲಿ ಅಸಹಕಾರ ನೀಡುತ್ತಾ ರಾಜಕೀಯ ಮಾಡುತ್ತಿದೆ. ಇಂತಹ ವಿಷಯಗಳಲ್ಲಿ ರಾಜಕೀಯ ‌ಬೇಡ‌ ಎಂದು ನುಡಿದರು.

ದೇವೇಗೌಡರ ಕುಟುಂಬವನ್ನು ಅತಿಯಾಗಿ ನಿಂದಿಸಿದ್ದಕ್ಕಾಗಿಯೇ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಕಾಂಟ್ರಾಕ್ಟ್ ರೂಪದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಸಚಿವ ಸ್ಥಾನ ಸಿಕ್ಕಾಗ ಜನಸೇವೆ ಮಾಡುವುದನ್ನು ಬಿಟ್ಟು ಮತ್ತೆ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಿದ್ದಾರೆ. ಜನ ಇದನ್ನು ಒಪ್ಪುವುದಿಲ್ಲ. ರಾಜಕೀಯ ನಿಂದನೆ ಬಿಟ್ಟು ಕೆಲಸ ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.

ಗಣೇಶ ಚತುರ್ಥಿ ಸೇರಿದಂತೆ ಯಾವುದೇ ಹಬ್ಬ ಆಚರಣೆಗಳನ್ನು ಜನ ಮುಕ್ತವಾಗಿ ಒಂದೆರಡು ದಿನ ಆಚರಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಗೊಂದಲ, ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಯಾವುದೋ ಒಂದು ಸಮುದಾಯ ಅಥವಾ ಧರ್ಮವನ್ನು ಓಲೈಕೆ ಮಾಡುವುದನ್ನು ಬಿಟ್ಟು ಸರ್ವ ಜನಾಂಗದ ಜೊತೆ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಪ್ರಸ್ತುತ ಸರ್ಕಾರ ಅದನ್ನು ಪಾಲಿಸುತ್ತಿಲ್ಲ ಎಂದು ಟೀಕಿಸಿದರು.

ಮೈತ್ರಿ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣೆ ಹತ್ತಿರ ಬಂದಾಗ ಯಾವ ಪಕ್ಷಕ್ಕೆ ಟಿಕೆಟ್‌ ಕೊಡಬೇಕೆಂಬುದನ್ನು ಸರ್ವೆಗಳ ಮೂಲಕ ನಿರ್ಧರಿಸಲಾಗುತ್ತದೆ. ಈಗ ಮಾತನಾಡುವ ಸಂದರ್ಭ ಅಲ್ಲ. ಮೈತ್ರಿ ಪಾಲನೆ ಆಗಿದ್ದಕ್ಕೆ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದರು.

ರೈತರ ವಿಚಾರ ಚರ್ಚಿಸಲು ರಾಜ್ಯ ಸರ್ಕಾರವು ಮೂರು ದಿನಗಳ ಅಧಿವೇಶನ ‌ಕರೆದಿದೆ. ಕಾಟಾಚಾರಕ್ಕೆ ಅಧಿವೇಶನ ನಡೆಸಿ ರೈತರ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ ದೇವೇಗೌಡ ಹಾಗೂ ಕುಮಾರಸ್ವಾಮಿ ಚರ್ಚಿಸಿ ಜೆಡಿಎಸ್‌ನಿಂದ ರಾಜ್ಯದಾದ್ಯಂತ ರೈತ ಸಂಕಲ್ಪ ಯಾತ್ರೆ ಕೈಗೊಳ್ಳಲಾಗುವುದು ಎಂದು ನಿಖಿಲ್‌ ಕುಮಾರಸ್ವಾಮಿ ಎಚ್ಚರಿಸಿದರು.

ಇಡೀ ರಾಜ್ಯ ಬರಪೀಡಿತವಾಗಿದೆ. ಆದರೆ, ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲವಾಗಿದೆ. ಮಳೆಯನ್ನೇ ನೆಚ್ಚಿಕೊಂಡು ಬೆಳೆ ಬೆಳೆದಿದ್ದ ರೈತರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಎಲ್ಲಾ ತಾಲ್ಲೂಕುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡಬೇಕು. ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಸಾಲಮನ್ನಾ ಮಾಡಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು.

Related Posts

Leave a Reply

Your email address will not be published. Required fields are marked *