Friday, September 04, 2026
Menu

ಬೇಲೂರಿನಲ್ಲಿ ದೂರು ನೀಡಲು ಹೋದ ವ್ಯಕ್ತಿ ಮೇಲೆ ಮಹಿಳಾ ಪೇದೆ ಹಲ್ಲೆ

ಹಣಕಾಸಿಗೆ ಸಂಬಂಧಿಸಿದಂತೆ ಗಲಾಟೆ ನಡೆದ ಬಗ್ಗೆ ದೂರು ನೀಡಲೆಂದು ಬೇಲೂರು ಪೊಲೀಸ್‌ ಠಾಣೆಗೆ ಹೋಗಿದ್ದ ವ್ಯಕ್ತಿ ಮೇಲೆ ಮಹಿಳಾ ಪೇದೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಬೇಲೂರು ಕಬ್ಬಿನಮನೆ ಗ್ರಾಮದ ಪ್ರಕಾಶ್‌ ಎಂಬವರ ಮೇಲೆ ಮಹಿಳಾ ಕಾನ್ಸ್‌ಟೇಬಲ್ ಲಾವಣ್ಯ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ತನ್ನ ಮೇಲೆ ಗೋವಿನಹಳ್ಳಿ ಮೂರ್ತಿ ಕೆರಲೂರು ಗ್ರಾಮದ ಪರಮೇಶ ಎಂಬವರು ಹಲ್ಲೆ ಮಾಡಿ ಹಾಗೂ ಜೀವ ಬೆದರಿಕೆ ಹಾಕಿದ್ದರು ಎಂದು ಪ್ರಕಾಶ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು.
ದೂರು ಪಡೆಯದೆ ಪೊಲೀಸ್ ಠಾಣೆಯೊಳಗೆ ಅವರನ್ನು ಗಂಟೆಗಟ್ಟಲೆ ಪೊಲೀಸರು ಕೂರಿಸಿದ್ದರು. ದೂರು ತೆಗೆದುಕೊಂಡು ಎಫ್‌ಐಆರ್ ದಾಖಲು ಮಾಡಿ ಎಂದು ಪ್ರಕಾಶ್ ಹೇಳಿದ ವೇಳೆ ಮಹಿಳಾ ಕಾನ್ಸ್‌ಟೇಬಲ್ ಲಾವಣ್ಯ ಲಾಠಿಯಿಂದ ಹಲ್ಲೆ ಮಾಡಿದ್ದು, ಪ್ರಕಾಶ ಠಾಣೆಯಲ್ಲಿ ಕುಸಿದು ಬಿದ್ದಿದ್ದರು.

ಠಾಣೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಆರೈಕೆ ಮಾಡದೆ ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ. ಈ ಬಗ್ಗೆ ಐದು ಬಾರಿ ಹಿಂದಿನ ಎಸ್ಪಿ ಮಹಮದ್‌ ಸುಜೇತಾ ಅವರನ್ನು ಭೇಟಿ ಮಾಡಿ ದೂರು ನೀಡಿದ್ದರೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಪ್ರಕಾಶ್‌ ದೂರಿದ್ದಾರೆ.

ಪೊಲೀಸ್ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಆರ್‌ಟಿಐನಡಿ ಸಿಪಿಐ ರೇವಣ್ಣ ಅವರನ್ನು ಕೇಳಿದ್ದರು. ಆದರೆ ಪೊಲೀಸರು ನೀಡಿರಲಿಲ್ಲ. ಪೊಲೀಸ್ ದೂರು ಪ್ರಾಧಿಕಾರದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರೂ ಪೊಲೀಸರು ನೀಡಿಲ್ಲ. ಬಳಿಕ ಪ್ರಕಾಶ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೋರ್ಟ್ ಆದೇಶ ನೀಡಿದ ನಂತರ ಬೇಲೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿ ಕೊಟ್ಟಿದ್ದಾರೆ. ಸಿಸಿಟಿವಿಯಲ್ಲಿ ಮಹಿಳಾ ಕಾನ್ಸ್‌ಟೇಬಲ್ ಹಲ್ಲೆ ಮಾಡುವ ದೃಶ್ಯ ಹಾಗೂ ಪ್ರಕಾಶ ಕುಸಿದು ಬಿದ್ದಿರುವ ದೃಶ್ಯ ಸೆರೆಯಾಗಿದೆ.

ಪ್ರಕರಣ ದಾಖಲಿಸಲು ಪೊಲೀಸರು ಲಂಚ ಕೇಳಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ತನಗೆ ನ್ಯಾಯ ಒದಗಿಸಬೇಕೆಂದು ‌ ಒತ್ತಾಯಿಸಿದ್ದಾರೆ‌.

Related Posts

Leave a Reply

Your email address will not be published. Required fields are marked *