ಆಡಳಿತದ ಮಟ್ಟದಲ್ಲಿ ತುಂಬಿರುವ ಕೊಳೆ ಮತ್ತು ಕಸವನ್ನು ಒಂದೇ ದಿನದಲ್ಲಿ ಯಾವ ಸರ್ಕಾರವೂ ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ. ಸಚಿವರುಗಳಾಗಿ ಕೃಷ್ಣಬೈರೇಗೌಡ ಮತ್ತು ಖಾದರ್ ಈಗ ಆರಂಭಿಸಿರುವ ಜನಪರ ಕಾರ್ಯವನ್ನು ಡಿ ಕೆ ಸಂಪುಟದ ಇತರ ಮಂತ್ರಿಗಳೂ ಕೈಗೆತ್ತಿಕೊಂಡರೆ ರಾಜ್ಯಕ್ಕೆ ಬಹಳಷ್ಟು ಒಳಿತಾದೀತು.
ಸಾರ್ವಜನಿಕ ಜನಾರೋಗ್ಯ ಹಾಗೂ ನೈರ್ಮಲ್ಯ ಸಂರಕ್ಷಣೆಯ ನೇರ ಹೊಣೆ ಸರ್ಕಾರದ್ದು. ಈ ವಿಚಾರದಲ್ಲಿ ಚುನಾಯಿತ ಸರ್ಕಾರಗಳ ರಾಜಿ ಸಲ್ಲದು. ನೆಲದ ಕಾನೂನುಗಳಾದರೂ ಈ ಜನತೆಗೆ ಯಾಕೆ ಬೇಕು ? ಈ ಪ್ರಶ್ನೆಯನ್ನು ಕಾನೂನು ಉಲ್ಲಂಘಿಸುವ ಪ್ರತಿ ವ್ಯಕ್ತಿ ಮತ್ತು ಸಮಾಜ ತನ್ನನ್ನು ತಾನೆ ಕೇಳಿಕೊಳ್ಳುವಂತಹದು. ನಿಯಮ ರೂಪಿಸುವ ಸರ್ಕಾರವನ್ನು ಮಾತ್ರವೇ ಉತ್ತಮ ಆಡಳಿತದ ಸಂಕೇತವಲ್ಲ. ರಾಜ್ಯವೊಂದರಲ್ಲಿ ಸುಶಾಸನ ಮತ್ತು ಸಮಾಜಹಿತ ಸರ್ಕಾರಿ ನಿಬಂಧನೆಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕಾದರೆ ಜನತೆಯ ಪ್ರಾಮಾಣಿಕತೆಯೂ ಅತಿ ಮುಖ್ಯ.
ರಾಜ್ಯದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಆರೋಗ್ಯ ಮತ್ತು ಬೆಂಗಳೂರು ಮೂಲಸೌಕರ್ಯ ಇಲಾಖೆಯಲ್ಲಿ ಗಮನಾರ್ಹ ಸಾರ್ವತ್ರಿಕ ಸುಧಾರಣಾತ್ಮಕ ಕೆಲಸಗಳು ಪ್ರಗತಿಯಲ್ಲಿವೆ . ಜನಪರವಾದ ಮತ್ತು ಶಾಸನಬದ್ಧವಾದ ನಿಯಮಾವಳಿಗಳನ್ನು ಜಾರಿಗೆ ತರಲು ಯಾವುದೇ ಮುಲಾಜಿಲ್ಲದ ರೀತಿಯಲ್ಲಿ ಮಂತ್ರಿಗಳಿಬ್ಬರು ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹ. ಕೃಷ್ಣಬೈರೇಗೌಡ ಮತ್ತು ಯು ಟಿ ಖಾದರ್ ಈಗ ನಾಡಿನ ರಾಜಧಾನಿಯಲ್ಲದೆ ರಾಜ್ಯದಲ್ಲಿ ಜಡ್ಡುಗಟ್ಟಿದ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗಿರುವವುದು ಶ್ಲಾಘನೀಯ.
ಮೊದಲನೆಯದಾಗಿ ಎಷ್ಟೋ ವರ್ಷಗಳಿಂದ ಬೆಂಗಳೂರಿನ ಪಾದಚಾರಿಗಳ ಮಾರ್ಗಗಳು ಪಟ್ಟಭದ್ರ ವ್ಯಾಪಾರಿಗಳ ಖಾಸಗಿ ಸ್ವತ್ತಾಗಿ ಪರಿಣಮಿಸಿತ್ತು. ಆದರೆ ಸಚಿವ ಬೈರೇಗೌಡರ ಖಡಕ್ ನಿರ್ವಹಣೆ ಮತ್ತು ನಿಗಾ ಫಲವಾಗಿ ನಗರದ ಬಹುತೇಕ ಪಾದಚಾರಿ ಮಾರ್ಗಗಳಲ್ಲಿಂದು ಒತ್ತುವರಿ ಮುಕ್ತಗೊಂಡು ಸಾರ್ವಜನಿಕರು ನೆಮ್ಮದಿಯಿಂದ ಸಂಚರಿಸುವಂತಾಗಿದೆ. ಸಚಿವರ ಈ ಕಮದಿಂದ ಜೇಬುಗಳ್ಳರು, ವಂಚಕರು ಮತ್ತು ನಕಲಿ ಮಾರಾಟಗಾರರ ಹಾವಳಿ ತುಸು ಮಟ್ಟಿಗೆ ತಹಬದಿಗೆ ಬಂದಿದೆ. ಇದು ಲಘು ಅಪರಾಧಗಳನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸಲು ಸಹಾಯಕವೂ ಆಗಿದೆ. ಬೆಂಗಳೂರಿನಲ್ಲಿ ಫುಟ್ಪಾತ್ ವ್ಯಾಪಾರ ಪ್ರಪಂಚದ ಹಿಂದೆ ಹಲವು ಹತ್ತು ಸಮಾಜವಿರೋಧಿ ಕರಾಳತೆಯೂ ಇದೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಬೆಂಗಳೂರಿನ ಉಸ್ತುವಾರಿ ಸಚಿವರು ನೇರ ಕಡಿವಾಣ ಹಾಕಿರುವುದನ್ನು ಗಮನಿಸುವಂತಹದು.
ನಕಲಿ ಔಷಧಿಗಳ ವಂಚಕರ ಜಾಲ ಹಾಗೂ ಸಿದ್ಧ ಆಹಾರವನ್ನು ಆನ್ಲೈನ್ ಮೂಲಕ ಜನತೆಗೆ ಪೂರೈಸುವ ಖಾಸಗಿ ಸಂಸ್ಥೆಗಳ ಕರಾಳತೆಯ ಮುಖಗಳನ್ನು ಬಿಚ್ಚಿಡಲು ಆರೋಗ್ಯ ಮಂತ್ರಿ ಯುಟಿ ಖಾದರ್ ಈಗ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ನಕಲಿ ಔಷಧಿ ಪೂರೈಸುವ ದಂಧೆಕೋರರು ಯಾರೂ ಖಜಾನೆಗೆ ತೆರಿಗೆಯನ್ನು ಪಾವತಿ ಮಾಡಲು ಸಾಧ್ಯವಿಲ್ಲ. ಆಡಳಿತದ ಮಟ್ಟದಲ್ಲಿ ವ್ಯಾಪಕ ಅಕ್ರಮಗಳಿಗೆ ಕುಮ್ಮಕ್ಕು ನೀಡುವ ವಂಚಕರ ಜಾಲವನ್ನು ಸಚಿವ ಖಾದರ್ ಪತ್ತೆ ಹಚ್ಚುತ್ತಿರುವುದು ಗಮನಾರ್ಹ. ಅಲ್ಲದೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್, ಕ್ಲಬ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಸುರಕ್ಷತೆಯ ಸೂತ್ರಗಳನ್ನು ಗಾಳಿಗೆ ತೂರಿ ತಮಗಿಷ್ಡ ಬಂದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಮಾಲಿಕರಿಗೆ ಆರೋಗ್ಯ ಇಲಾಖೆಯ ಜಾಗೃತ ಪಡೆ ಬಲೆ ಬೀಸಿದೆ.
ಭ್ರಷ್ಟ ಅಧಿಕಾರಿಗಳನ್ನು ವಾರ್ಡ್ ಮಟ್ಟದಲ್ಲಿಯೇ ಮ್ಯಾನೇಜ್ ಮಾಡುತ್ತಾ, ಈ ನೆಲದ ಕಾನೂನುಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಣ್ಣುಪಾಲು ಮಾಡಿದವರೆಲ್ಲರ ಮೇಲೆ ಸಚಿವ ಖಾದರ್ ದುರ್ಬೀನು ಹಾಕಿರುವುದು ಗಮನಾರ್ಹ. ಒಟ್ಟಿನಲ್ಲಿ ಆಡಳಿತದ ಮಟ್ಟದಲಿ ತುಂಬಿರುವ ಕೊಳೆ ಮತ್ತು ಕಸವನ್ನು ಒಂದೇ ದಿನದಲ್ಲಿ ತೊಲಗಿಸಲಾಗದು. ಸಚಿವರುಗಳಾಗಿ ಕೃಷ್ಣಬೈರೇಗೌಡ ಮತ್ತು ಖಾದರ್ ಈಗ ಆರಂಭಿಸಿರುವ ಜನಪರ ಕಾರ್ಯವನ್ನು ಡಿಕೆ ಸಂಪುಟದ ಇತರೆ ಮಂತ್ರಿಗಳೂ ಕೈಗೆತ್ತಿಕೊಂಡರೆ ರಾಜ್ಯಕ್ಕೆ ಒಳಿತು.


