ಮಾಣಿಕ್ ಷಾ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ ಐದು ಹೊಸ ಕಮಿಷನರೇಟ್ ಸ್ಥಾಪನೆ ಮತ್ತು ಬೆಂಗಳೂರಿನಲ್ಲಿ ರೌಡಿ ನಿಗ್ರಹ ಪಡೆ ರಚನೆ ಮಾಡುವುದಾಗಿ ಘೋಷಿಸಿದ್ದಾರೆ.
ರಾಜ್ಯದ ವಿವಿಧೆಡೆ ಎಐ ಹಬ್ ಗಳ ಸ್ಥಾಪನೆ, ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’ ಯೋಜನೆ, ಸರ್ಕಾರಿ ವಲಯದ 72,000 ಪ್ರಮುಖ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭ. ಮುಂದಿನ ಆರು ತಿಂಗಳಲ್ಲಿ ಎಲ್ಲಾ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ. ‘ಯುವ ಉದ್ಯೋಗ ಸೇತು’ ಯೋಜನೆ. ‘ಉದ್ಯೋಗ ನಿಧಿ’ ಯೋಜನೆ ಮೂಲಕ ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಪ್ರಕಟಿಸಿದರು.
ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ₹2,500 ಪ್ರೋತ್ಸಾಹಧನ, ಮುಂದಿನ ಎರಡು ವರ್ಷಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ ಗುರಿ. ರೈತರಿಗಾಗಿ ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆ. • ಡ್ರೋನ್ ಮತ್ತು ಉಪಗ್ರಹದ ಮೂಲಕ ಬೆಳೆ ಸಮೀಕ್ಷೆ ಹಾಗೂ ನೈಜ ಸಮಯದ ಮಾಹಿತಿ, ಸಣ್ಣ ರೈತರಿಗಾಗಿ ‘ರೈತ ಮಿತ್ರ’ ಕಾರ್ಯಕ್ರಮ ನೀಡುತ್ತಿರುವುದಾಗಿ ಹೇಳಿದರು.
ದೊಡ್ಡಬಳ್ಳಾಪುರದಲ್ಲಿ ಅಡ್ವಾನ್ಸ್ ಮ್ಯಾನುಫ್ಯಾಕ್ಚರ್ ಕ್ಲಸ್ಟರ್ ಸ್ಥಾಪನೆ, ₹20,000 ಕೋಟಿ ಹೂಡಿಕೆ ಹಾಗೂ 1 ಲಕ್ಷ ಉದ್ಯೋಗಗಳ ಸೃಷ್ಟಿ ಗುರಿ. ‘ಬಿಯಾಂಡ್ ಬೆಂಗಳೂರು’ ಅಡಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ.
ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ‘ಸಹಾಯ ಹಸ್ತ’ ಯೋಜನೆ, ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಲ್ಲಿ 7.5% ಮೀಸಲಾತಿ, ರಾಜ್ಯದ ಪ್ರತಿಯೊಂದು ಪಟ್ಟಣ ಮತ್ತು ನಗರದಲ್ಲಿ ರಿಂಗ್ ರಸ್ತೆ ಹಾಗೂ ಮೊಬಿಲಿಟಿ ಗ್ರಿಡ್ ಅಭಿವೃದ್ಧಿ, ಬೆಂಗಳೂರು ಬಿಸಿನೆಸ್ ಕಾರಿಡಾರ್ – 117 ಕಿ.ಮೀ. ರಿಂಗ್ ರಸ್ತೆ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಐದು ಬೃಹತ್ ವೃಕ್ಷೋಧ್ಯಾನ (ಟ್ರೀ ಪಾರ್ಕ್) ನಿರ್ಮಾಣ, ಬೆಂಗಳೂರಿನ ಏಳು ಪ್ರಮುಖ ಕೆರೆಗಳ ಅಭಿವೃದ್ಧಿ, ಮೇಕೆದಾಟು ಯೋಜನೆ ಆರಂಭ, 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ₹16,000 ಕೋಟಿ ಅನುಮೋದನೆ ಘೋಷಿಸಿದರು.


