ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ದಾರುಣ ಅಂತ್ಯ ಕಂಡಿದೆ. ಯುವಕ ಪತ್ನಿಯನ್ನು ಕೊಲೆ ಮಾಡಿದ ಬಳಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುಮಂತ್ ಜೈನ್(32) ಹಾಗೂ ಪದ್ಮಾವತಿ (29) ಮೃತಪಟ್ಟ ಜೋಡಿ. ಸುಮಂತ್ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಪದ್ಮಾವತಿ ವೈಟ್ಫೀಲ್ಡ್ಲ್ಡ್ನಲ್ಲಿರುವ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದರು.
ಹೆಗ್ಗನಹಳ್ಳಿಯ ರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ಸುಮಂತ್ ತನ್ನ ಪತ್ನಿ ಪದ್ಮಾವತಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜಗೋಪಾಲ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿಯ ಎಳನೀರು ಗ್ರಾಮದ ನಿವಾಸಿ ಸುಮಂತ್ ಹುಬ್ಬಳ್ಳಿಯ ಪದ್ಮಾವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ನಾಲ್ಕು ತಿಂಗಳ ಹಿಂದೆ ಲಗ್ಗೆರೆ ರಾಜೇಶ್ವರಿ ನಗರಕ್ಕೆ ಶಿಫ್ಟ್ ಆಗಿದ್ದರು. ರಾತ್ರಿ ದಂಪತಿ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿ ಸುಮಂತ್ ಹೆಂಡತಿಯನ್ನು ಕೊಲೆ ಮಾಡಿತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುಮಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ನಾನು ಸಾಯುತ್ತಿದ್ದೇನೆ. ಈ ಮನೆ ನನ್ನದು ನನ್ನದು ಎಂದು ಹೇಳುತ್ತಿರುವ ಪತ್ನಿ ಜೊತೆ ಜಗಳವಾಗುತ್ತಿದೆ. ಈ ವಿಷಯವಾಗಿ ನಾನು ಸಾಯುತ್ತಿದ್ದೇನೆ. ನನ್ನ ಪಿಎಫ್ ಹಣ ಹಾಗೂ ಮನೆಯಲ್ಲಿ ಇರುವ ವಸ್ತುಗಳನ್ನು ನೀವು ತೆಗೆದುಕೊಂಡು ಹೋಗಿ ಎಂದು ವಾಟ್ಸಾಪ್ನಲ್ಲಿ ವಾಯ್ಸ್ ಮೆಸೇಜ್ ಕಳುಹಿದ್ದಾರೆ. ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


