ಬಿಡದಿ ಟೌನ್ ಶಿಪ್ ಕುಮಾರಸ್ವಾಮಿಯವರ ಉತ್ತಮ ಯೋಜನೆ, ಈಗ ಕೆಲವು ಒತ್ತಡಗಳಿಂದ ಅವರು ರಾಜಕೀಯ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಬೇಸರಿಸಿಕೊಳ್ಳುವುದಿಲ್ಲ. ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಆಗಿದ್ದ 1 ಸಾವಿರ ಎಕರೆ ಕೈಗಾರಿಕಾ ಪ್ರದೇಶ, ದೇವೇಗೌಡರ ನೈಸ್ ರಸ್ತೆ ಯೋಜನೆ ಅತ್ಯುತ್ತಮ ಎಂದು ಸಿಎಂ ಡಿಕೆ ಶಿವಕುಮಾರ್ ಹೊಗಳಿದರು.
ವಿಧಾನಪರಿಷತ್ ನಲ್ಲಿ ಮಾತನಾಡಿದ ಮುಖ್ಯಮಂತ್ರಿ, ಬೆಂಗಳೂರು ಬೆಳೆಯುತ್ತಿದೆ. ಈಶಾನ್ಯ ಭಾರತದ ಜನ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಬೆಂಗಳೂರಿಗೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿರುವ ಜನಕ್ಕೆ ಮೂಲಸೌಕರ್ಯಗಳನ್ನು ಹೇಗೆ ನೀಡುವುದು. ಹೀಗೆ ಹೊಸ ನಗರಗಳನ್ನು ನಿರ್ಮಾಣ ಮಾಡದೇ ಹೋದರೆ ಅವಕಾಶ ನೀಡುವುದು ಹೇಗೆ ಎಂದು ಪ್ರಶ್ನಿಸಿದರು.
ಪಿಜಿಆರ್ ಸಿಂದ್ಯಾ ಕಾಲದಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ದೇವೇಗೌಡರ ಕಾಲದಲ್ಲಿ ಬಿಡದಿ, ವೀರಪ್ಪಮೊಯ್ಲಿ ಅವರ ಕಾಲದಲ್ಲಿ ಎಲೆಕ್ಟ್ರಾನಿಕ್ ಸಿಟಿ, ಪೀಣ್ಯ ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ಆಯಿತು. ವೀರೇಂದ್ರ ಪಾಟೀಲ್ ಅವರಿಗೆ ಬುದ್ದಿ ಇರಲಿಲ್ಲವೇ?, ಸುಳ್ಳಿಗೂ ಸತ್ಯಕ್ಕೂ ಅಂತರ ನಾಲ್ಕು ಬೆರಳು. ಕಿವಿಯಲ್ಲಿ ಕೇಳಿದ್ದು ಸತ್ಯವಲ್ಲ. ಕಣ್ಣಲ್ಲಿ ನೋಡಿದ್ದು ಸತ್ಯ. ಎಸ್ ಎಂ ಕೃಷ್ಣ ಅವರ ನೀಲಿ ಕಣ್ಣಿನ ಹುಡುಗ ನಾನಾಗಿದ್ದೆ. ಆದರೂ ಅವರಲ್ಲಿಯೇ ನನ್ನ ಮೇಲೆ ಸಹೋದ್ಯೋಗಿಗಳೇ ಚಾಡಿ ಹೇಳುತ್ತಿದ್ದರು ಎಂದು ಹೇಳಿದರು.
ನನಗೆ ರಾಜ್ಯದ ಜನರ ಸೇವೆ ಮಾಡಲು ಅನೇಕ ಕನಸುಗಳಿವೆ. ಈ ಕನಸುಗಳನ್ನು ಈಡೇರಿಸಲು ನೀವೆಲ್ಲರೂ ಸಹಕಾರ ನೀಡಿ. ರಾಜಕಾರಣ ಹೊರಗೆ ಮಾಡೋಣ. ಇಲ್ಲಿ ಸೇವೆ ಮಾಡೋಣ. ರಾಜ್ಯದ ಯಶಸ್ಸಿಗೆ ಒಟ್ಟಾಗಿ ನಡೆಯೋಣ. ಜನರು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳೋಣ. ಜನರು ನಮ್ಮನ್ನು ನೆನಪಿಟ್ಟುಕೊಳ್ಳುವುದು ಅಧಿಕಾರದಿಂದಲ್ಲ, ನಾವು ಮಾಡಿದ ಕೆಲಸದಿಂದ ಎಂದು ಹೇಳಿದರು.
ಬಂಗಾರಪ್ಪ ಅವರು ಧರಂಸಿಂಗ್ ಅವರ ಬಳಿಯಿದ್ದ ಬಂಧೀಖಾನೆ ಖಾತೆಯನ್ನು ನನಗೆ ನೀಡಿದರು. ಆಗ ಅವರು ನಾನೂ ಈ ಖಾತೆ ನಿರ್ವಹಿಸಿ ಈಗ ಸಿಎಂ ಆಗಿದ್ದೀನಿ. ನೀನೂ ಒಂದಲ್ಲ ಒಂದು ದಿನ ಸಿಎಂ ಆಗುವೆ ಎಂದಿದ್ದರು. ಈಗ ಅವರ ಭವಿಷ್ಯ ನಿಜವಾಗಿದೆ. ನಾನು ಮಾನವೀಯತೆ ನಂಬುತ್ತೇನೆ. ನನ್ನ ಗುರುಗಳು ನನಗೆ ಇದನ್ನೇ ಹೇಳಿಕೊಟ್ಟಿದ್ದಾರೆ. ಮಾನ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾನು ಒಕ್ಕಲಿಗನಾದರೂ ನಂಬುವುದು ರಂಭಾಪುರಿ ಶ್ರೀಗಳನ್ನು ಎಂದು ಹೇಳಿದರು.
ದುಃಖ ಮತ್ತು ಸಂತೋಷ ಎರಡೂ ಸಂದರ್ಭದಲ್ಲಿ ನಾವು ನಿಂತಿದ್ದೇವೆ. ಬಸರಾಜ ಹೊರಟ್ಟಿ ಘನತೆಯಿಂದ ವಿಧಾನಪರಿಷತ್ತನ್ನು ನಡೆಸಿಕೊಟ್ಟು ಮಾದರಿಯಾಗಿದ್ದಾರೆ. ಅವರು ನಮಗೆಲ್ಲಾ ಕೃತಜ್ಞತೆ ಸಲ್ಲಿಸಬೇಕು ಎಂದು ಆಸೆಪಟ್ಟಿದ್ದರು. ಆದರೆ ಪರಿಸ್ಥಿತಿಯ ನಿರ್ಣಯ ಬೇರೆಯೇ ಇತ್ತು. ಈಗ ಆ ಘಟನೆಯನ್ನು ಮರೆಯೋಣ ಎಂದರು.
ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದರು. ಆಗ ಇದನ್ನು ಖೈದಿಗಳು ಕಟ್ಟಿದರು. ಒಂದು ದಿನ ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ಹನುಮಂತಯ್ಯ ಅವರ ಮೇಲೆ ಖೈದಿಗಳು ಸಿಟ್ಟಿನಿಂದ ಚಪ್ಪಲಿ ಎಸೆದಿದ್ದರು. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರಿಗೇ ಈ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ . ಇತಿಹಾಸಗಳು ಬೇಕಾದಷ್ಟು ಸಂದರ್ಭಗಳನ್ನು ಸೃಷ್ಟಿಸುತ್ತವೆ. ವೀರೇಂದ್ರ ಪಾಟೀಲರ ಆಡಳಿತ, ದೇವರಾಜ ಅರಸು ಅವರು ಹೊಸ ನಾಯಕರನ್ನು ಹುಟ್ಟು ಹಾಕಿದರು. ಯುವಕರಿಗೆ ಪ್ರೋತ್ಸಾಹ ನೀಡಿದರು. ಗುಂಡೂರಾವ್ ಅವರ ಆಡಳಿತ ದಿಟ್ಟ ನಿರ್ಧಾರಗಳು ಮಾದರಿ. ರಾಮಕೃಷ್ಣ ಹೆಗಡೆ ಪರಿಶುದ್ದ ಆಡಳಿತಗಾರರು. ಬೊಮ್ಮಾಯಿ ಅವರ ಆಡಳಿತ ಹಾಗೂ ಅವರನ್ನು ಅಧಿಕಾರದ ಕುರ್ಚಿಯಿಂದ ಇಳಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರಿಗೆ ಮಣ್ಣಿನ ಮಗ ಎನ್ನುವ ಬಿರುದು ಸುಮ್ಮನೆ ಬಂದಿಲ್ಲ. ಅವರು ನಾಡಿನ ರೈತರ ಪರವಾಗಿ ಅಪಾರ ಹೋರಾಟ ಮಾಡಿದ್ದಾರೆ. ನೀರಾವರಿ ಯೋಜನೆಗಳನ್ನು ರೂಪಿಸಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಮೇಲ್ಸೇತುವೆ ನಿರ್ಮಾಣ ಮಾಡಿದ್ದು ಅವರೇ. ಕುಮಾರಸ್ವಾಮಿ ಹಾಗೂ ನಮ್ಮ ನಡುವೆ ರಾಜಕೀಯ ವೈರುಧ್ಯ ಇರಬಹುದು. ಅವರ ಪೆರಿಫೆರಲ್ ರಿಂಗ್ ರಸ್ತೆ, ಬಿಡದಿ ಸೇರಿದಂತೆ 5 ಟೌನ್ ಶಿಪ್ ನಿರ್ಮಾಣದಂಥ ಯೋಜನೆಗಳನ್ನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.
ಜೀವನದಲ್ಲಿ ಯಶಸ್ಸು ಸಿಗಬೇಕಾದರೆ. ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನ ಗುರಿ ಇರಬೇಕು, ವಿಧುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು ಎಂದ ಸಿಎಂ ಗೆ ಪ್ರತಿಪಕ್ಷದವರು ಈ ಮಾತನ್ನು ಯತೀಂದ್ರ ಅವರನ್ನು ನೋಡಿ ಹೇಳುತ್ತಿದ್ದೀರಿ ಎಂದು ಕಾಲೆಳೆದಾಗ, ನಾನು ಯತೀಂದ್ರ ಅವರನ್ನು ನೋಡಿ ವಿಧುರನ ನೀತಿ ಎಂದು ಹೇಳಿದೆ. ವಿಧುರನ ನೀತಿಯೂ ಬಹಳ ಮುಖ್ಯ ಎಂದರು. ಆಗ ನಿಮ್ಮದು ಯಾವ ನೀತಿ ಎಂದು ಪ್ರತಿಪಕ್ಷದವರು ಕೇಳಿದಾಗ, ನನ್ನದು ಧರ್ಮರಾಯನ ಧರ್ಮತ್ವ. ಕರ್ಣನ ದಾನತ್ವ, ಅರ್ಜುನನ ಗುರಿ ಹೀಗೆ ಎಲ್ಲಾ ಗುಣ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಉತ್ತರಿಸಿದರು.
8 ಸಾವಿರ ಕೋಟಿ ಸಿಎಸ್ ಆರ್ ಅನುದಾನವಿದೆ. ಎಲ್ಲವೂ ದುರ್ಬಳಕೆಯಾಗುತ್ತಿದೆ. ಶೇ.50 ಮೊತ್ತ ವಾಪಸ್ ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರಾಜ್ಯದ ಪ್ರತಿಯೊಬ್ಬರಿಗೂ ಒಳ್ಳೆಯ ಶಿಕ್ಷಣ, ಉದ್ಯೋಗ ವ್ಯವಸ್ಥೆ ಮಾಡುವ ಗುರಿಯೊಂದಿಗೆ, ಈ ಸಿಎಸ್ ಆರ್ ಅನುದಾನವನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಹೊಸ ಸಿಎಸ್ ಆರ್ ಯೋಜನೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಪಂಚಾಯಿತಿ ಮಟ್ಟದಲ್ಲೇ ಕಂಪನಿಗಳೇ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಿಎಸ್ ನಿಧಿಯನ್ನು ಬಳಸಿ ಅಭಿವೃದ್ಧಿಗೊಳಿಸುವ ಹೊಸ ನೀತಿಯನ್ನು ರೂಪಿಸುತ್ತಿದ್ದೇವೆ ಎಂದು ಸದನಕ್ಕೆ ವಿವರಿಸಿದರು.


