ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿ ರೋಣ ಶಾಸಕ ಗುರುಪಾದಗೌಡ ಸಂಗನಗೌಡ ಪಾಟೀಲ್ (ಜಿ.ಎಸ್. ಪಾಟೀಲ್) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಲೀಂ ಅಹ್ಮದ್ ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.
ವಿಧಾನ ಸಭಾಧ್ಯಕ್ಷರ ಚುನಾವಣೆಯಲ್ಲಿ ಜಿಎಸ್ ಪಾಟೀಲ್ ಏಕೈಕ ಅಭ್ಯರ್ಥಿಯಾಗಿದ್ದು, ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಶಿವಕುಮಾರ್ ಅವರು ಜಿ.ಎಸ್. ಪಾಟೀಲ್ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದರು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅನುಮೋದನೆ ನೀಡಿದರು. ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ಅವರು ಜಿ.ಎಸ್. ಪಾಟೀಲ್ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
1948ರ ಏಪ್ರಿಲ್ 10ರಂದು ಜನಿಸಿದ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರು ಸಂಗನಗೌಡ ಹಾಗೂ ತಾಯಿ ಬಸಮ್ಮ ಅವರ ಪುತ್ರ. ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದ ಅವರು, 1983ರಲ್ಲಿ ರೋಣ ಪಟ್ಟಣ ಪಂಚಾಯತ್ ಹಾಗೂ ಎಪಿಎಂಸಿ ಸದಸ್ಯರಾಗಿ ಸಾರ್ವಜನಿಕ ಬದುಕು ಆರಂಭಿಸಿದರು.
1989ರಲ್ಲಿ ಮೊದಲ ಬಾರಿಗೆ ರೋಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಅವರು, ನಂತರ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ವಿರೇಂದ್ರ ಪಾಟೀಲ್, ಎಸ್. ಬಂಗಾರಪ್ಪ ಹಾಗೂ ವೀರಪ್ಪ ಮೊಯ್ಲಿ ಅವಧಿಯಲ್ಲಿ ರೋಣ ಕ್ಷೇತ್ರದ ಅಭಿವೃದ್ಧಿಗೆ ಬಹಳಚ್ಟು ಕೊಡುಗೆ ನೀಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಬಹುಮತದ ಬೆಂಬಲದೊಂದಿಗೆ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಧ್ವನಿಮತದ ಮೂಲಕ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಪರವಾಗಿ 38 ಮತಗಳು ಚಲಾವಣೆಯಾಗಿದ್ದು, ಎನ್ಡಿಎ ಅಭ್ಯರ್ಥಿ ಬಿಜೆಪಿಯ ಪಿ.ಎಚ್. ಪೂಜಾರ್ ಪರವಾಗಿ 30 ಮತಗಳು ದಾಖಲಾಗಿವೆ.
ಬಸವರಾಜ ಹೊರಟ್ಟಿ ರಾಜೀನಾಮೆಯಿಂದ ತೆರವಾಗಿದ್ದ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ನಡುವೆ ಸ್ಪರ್ಧೆ ಇತ್ತು, ವಿಧಾನ ಪರಿಷತ್ತಿನ ಒಟ್ಟು 75 ಸದಸ್ಯರಲ್ಲಿ ಕಾಂಗ್ರೆಸ್ಗೆ 38, ಬಿಜೆಪಿಗೆ 25, ಜೆಡಿಎಸ್ಗೆ 6 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.
ಹಂಗಾಮಿ ಸಭಾಪತಿ ಪುಟ್ಟಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಭಾಪತಿ ಸ್ಥಾನಕ್ಕೆ ಒಟ್ಟು ಏಳು ಪ್ರಸ್ತಾವಗಳು ಸಲ್ಲಿಕೆಯಾಗಿದ್ದವು.ಐದು ಪ್ರಸ್ತಾವಗಳು ಸಲೀಂ ಅಹ್ಮದ್ ಪರವಾಗಿದ್ದರಿಂದ ಧ್ವನಿಮತಕ್ಕೆ ಹಾಕಲಾಯಿತು. ಬಹುಮತದ ಬೆಂಬಲ ಪಡೆದ ಸಲೀಂ ಅಹ್ಮದ್ ಅವರನ್ನು ಅಧಿಕೃತವಾಗಿ ವಿಧಾನ ಪರಿಷತ್ ಸಭಾಪತಿಯಾಗಿ ಘೋಷಿಸಲಾಯಿತು.


