ಕೋಲಾರದ ಚೆನ್ನಸಂದ್ರ ಗ್ರಾಮದಲ್ಲಿ ಪತ್ನಿಯು ಪತಿಗೆ ನಿದ್ರೆ ಮಾತ್ರೆ ತಿನ್ನಿಸಿದ ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ. ನಾರಾಯಣಸ್ವಾಮಿ (68) ಕೊಲೆಯಾದ ವ್ಯಕ್ತಿ, ಪತ್ನಿ ಜಗದಾಂಭ (58) ಕೊಲೆ ಮಾಡಿದಾಕೆ.
ಇವರಿಬ್ಬರು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು. ಹೇಗೋ ಪುಸಲಾಯಿಸಿ ಪತ್ನಿ ಪತಿಯನ್ನು ತೋಟದ ಮನೆಗೆ ಕರೆತಂದಿದ್ದು, ಊಟದಲ್ಲಿ 10 ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಳು. ಆತ ಮಲಗಿದ ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.
ಕೊಲೆ ಮಾಡಿದ ಬಳಿಕ ಆಕೆಯೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ. ಪೊಲೀಸರು ವಿಚಾರಣೆ ನಡೆಸಿದಾಗ, ಜಮೀನು ಮಾರಾಟ ಮಾಡಿದ ಹಣವನ್ನು ತನ್ನ ಕೈಗೆ ಕೊಟ್ಟಿಲ್ಲ. ಇನ್ನುಳಿದ ಜಮೀನನ್ನು ಮಾರಾಟ ಮಾಡಿ ಬಿಡುತ್ತಾನೆಂದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದವಾಗಿ ಮಹಿಳೆ ಸಾವು
ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿ ನೇಣು ಬಿಗಿದುಕೊಂಡಿದ್ದು, ಆಕೆಯನ್ನು ಗಂಡನ ಮನೆಯವರೇ ಕೊಲೆ ಮಾಡಿರುವುದಾಗಿ ಆರೋಪಿಸಿ ಮೃತದೇಹವನ್ನು ಮನೆ ಮುಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಹಾವೇರಿಯ ಹಾನಗಲ್ ತಾಲೂಕಿನ ಕಾಲ್ವೇಕಲ್ಲಾಪೂರ ಗ್ರಾಮದಲ್ಲಿ ನಡೆದಿದೆ.
ನೀಲಮ್ಮ ನೀರಲಗಿ (24) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಮಹಿಳೆ. ಮೂರು ತಿಂಗಳ ಹಿಂದೆ ಗಂಡ ಶಿವಾನಂದ ಮೃತಪಟ್ಟಿದ್ದ. ಆಸ್ತಿ ವಿಚಾರವಾಗಿ ಮನೆಯವರು ಮಹಿಳೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಐದು ಎಕರೆ ಜಮೀನು ಕೊಡಬೇಕಾಗುವು ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಹೇಳಿದ್ದಾರೆ.
ತಪ್ಪಿತಸ್ಥರ ಬಂಧಿಸುವವರೆಗೂ ಶವ ತೆಗೆಯುವುದಿಲ್ಲ ಎಂದು ಕುಟುಂಬದ ಸದಸ್ಯರು ಪಟ್ಟು ಹಿಡಿದಿದ್ದಾರೆ. ಆಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


