Menu

15 ದಿನ ಪ್ರತಿನಿತ್ಯ ತಮಿಳುನಾಡಿಗೆ 12,000 ಕ್ಯೂಸೆಕ್‌ ನೀರು ಹರಿಸಲು ಸಿಡಬ್ಲ್ಯುಆರ್‌ಸಿ ಸೂಚನೆ

ಮುಂದಿನ 15 ದಿನ ತಮಿಳುನಾಡಿಗೆ ಪ್ರತಿನಿತ್ಯ 12,000 ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ಕರ್ನಾಟಕಕ್ಕೆ ಸೂಚಿಸಿದೆ. ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.

ಮೂರು ಗಂಟೆಗೆ ನಡೆಯಲಿರುವ ಪ್ರಾಧಿಕಾರದ ಸಭೆಯಲ್ಲಿ ಸಿಡಬ್ಲ್ಯುಆರ್‌ಸಿ ಶಿಫಾರಸನ್ನು ಸಿಡಬ್ಲ್ಯುಎಂಎ ಎಷ್ಟರಮಟ್ಟಿಗೆ ಪುರಸ್ಕರಿಸಲಿದೆ ಹಾಗೂ ಕರ್ನಾಟಕ ತನ್ನ ಹಿತರಕ್ಷಣೆಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ದೆಹಲಿಯಲ್ಲಿರುವ ಸಿಡಬ್ಲ್ಯುಎಂಎ ಕಚೇರಿಯಲ್ಲಿ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಿತು. ಕರ್ನಾಟಕದ ಪರವಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಖುದ್ದಾಗಿ ಹಾಜರಿದ್ದು ರಾಜ್ಯದಲ್ಲಿನ ಜಲಾಶಯಗಳ ನೀರಿನ ಮಟ್ಟ ಹಾಗೂ ವಸ್ತುಸ್ಥಿತಿಯನ್ನು ಪ್ರಾಧಿಕಾರದ ಮುಂದಿಟ್ಟಿದ್ದರು.

ತಮಿಳುನಾಡು ರಾಜ್ಯದ ಹಿರಿಯ ಅಧಿಕಾರಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಒಂದೂವರೆ ಗಂಟೆ ಸಭೆಯಲ್ಲಿ ಭವಿಷ್ಯದ ಮಳೆ, ಈಗ ಜಲಾಶಯದಲ್ಲಿರುವ ನೀರಿನ ಸಂಗ್ರಹ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಾವೇರಿ ನೀರು ನಿಯಂತ್ರಣ ಸಮಿತಿ ಈ ಶಿಫಾರಸು ಮಾಡಿದೆ.

ಆಗಸ್ಟ್ 10ರವರೆಗೆ 9 ಟಿಎಂಸಿ ನೀರು ಹರಿದು ಹೋಗಿರುವುದು ತಮಿಳುನಾಡು ಗಡಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾಗಿದೆ. ಹೊಸ ಶಿಫಾರಸಿನಂತೆ ಮುಂದಿನ 15 ದಿನ ದಿನಕ್ಕೆ 12,000 ಕ್ಯೂಸೆಕ್‌ನಂತೆ ನೀರು ಹರಿಸಿದರೆ ತಮಿಳುನಾಡಿಗೆ ಹರಿಯುವ ಒಟ್ಟು ನೀರಿನ ಪ್ರಮಾಣ 16 ಟಿಎಂಸಿ ತಲುಪಲಿದೆ.

ನೀರು ಹರಿಸಲು ದಾವಣಗೆರೆಯಲ್ಲಿ ರೈತರ ಆಗ್ರಹ
ಭದ್ರಾ ಅಣೆಕಟ್ಟಿನಲ್ಲಿ 172 ಅಡಿ ನೀರು ಶೇಖರಣೆಯಾಗಿದೆ. ಆದರೂ ಮುಂಗಾರು ಬೆಳೆಗೆ ನೀರು ಹಾಯಿಸುತ್ತಿಲ್ಲ. ಪ್ರತಿ ವರ್ಷ ಹೋರಾಟ ಮಾಡಿಯೇ ನೀರು ಬಿಡಿಸಿಕೊಳ್ಳಬೇಕಾಗಿದೆ ಎಂದು ದಾವಣಗೆರೆ ಹಾಗೂ ಹರಿಹರ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿ ಜಿಎಂ ಗಂಗಾಧರಸ್ವಾಮಿ ರೈತರ ಜೊತೆ ಸಭೆ ನಡೆಸಿದರು. ದಾವಣಗೆರೆ, ಹರಿಹರ ಸೇರಿದಂತೆ ಭದ್ರ ಅಚ್ಚುಕಟ್ಟು ಪ್ರದೇಶದ ರೈತರು ಸಭೆಯಲ್ಲಿ ಭಾಗಿಯಾಗಿದ್ದರು. ಹೋರಾಟ ನಡೆಸಿಯೇ ಬೆಳೆಗಳಿಗೆ ನೀರು ತರಬೇಕಾದ ಪರಿಸ್ಥಿತಿ ಇದೆ. ಸುಮ್ಮನೆ ಸಭೆ ಮಾಡಿ ಹೋಗುವುದಲ್ಲ, ರೈತರಿಗೆ ನೀರು ತರುವುದರ ಬಗ್ಗೆ ಚಿಂತನೆ ಮಾಡಬೇಕು. ಆಗ ಸಭೆಗೆ ಮಹತ್ವ ಬರುತ್ತದೆ ಎಂದು ರೈತರು ಕಿಡಿ ಕಾರಿದ್ದಾರೆ.

ಉಸ್ತುವಾರಿ ಸಚಿವರು ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು. ಆ.15ರ ಒಳಗೆ ಭದ್ರ ನಾಲೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *